ಮಲ್ಲಿಗೆಯ ಹೂವರಳಿ ಮನದುಂಬಿ ನಗುತಿರಲು
ಎದುರಾಗಿ ನಿಂತಿಹಳು ನನ್ನ ಚೆಲುವೆ,
ಇಳಿಸಂಜೆ ಸಮಯದಲಿ, ತಿಳಿಗೆಂಪು ಬಾನಿನಲಿ
ಮೂಡಿದಾ ಚಿತ್ತಾರವದು ನನ್ನ ಒಲವೇ !
ಚೆಲುವು – ಒಲವು
ಸಾಂಗತ್ಯ

pic is taken from:http://eclipseofthemoon.files.wordpress.com/2011/11/alone.jpg
ನೀನಿರದೆ ಕಳೆದ ಇರುಳುಗಳಲ್ಲಿ
ಅದೇಕೋ ವಿಷಾದದ ಛಾಯೆ
ನಿನ್ನ ಮುಗುಳ್ನಗೆ ಏಕೋ
ಬಿಡದೇ ಕಾಡುವ ಮಾಯೆ.
ನೀನುಡಿವ ಸವಿಮಾತು
ನನಗದೇನೋ ಇಂಪು
ಸಿಹಿಮಾತ ಕೆಳದಿರೆ
ಮೈ ಮನವು ಹೂಡುವವು ಸಂಪು
ನಿನ್ನ ಅಪ್ಪುಗೆಯಲ್ಲಿ
ಮನಕೆ ಅದೇಕೋ ಹರ್ಷ
ನೀನಿರದಿರೆ ಜೊತೆಯಲ್ಲಿ
ದಿನವೊಂದೆನಗೆ ವರ್ಷ .
ನೀಲಿ ಕಂಗಳ ಹುಡುಗಿ
ನೀಲಿ ಕಂಗಳ ಹುಡುಗಿ,
ನೀ, ನನ್ನೆದೆಯಲ್ಲಿ
ಬರೆದು ಹೋದದ್ದು
ಬರಿದೆ ಅಕ್ಷರಗಳಲ್ಲ,
ಅದೊಂದು ಪ್ರೇಮ ಕಾವ್ಯ ||
ಈ ನನ್ನ ಮನವೆಂಬ
ಬರಡು ಭೂಮಿಯಲ್ಲಿ
ನೀ ಬಿತ್ತಿ ಹೋದದ್ದು,
ಬರಿಯ ಪ್ರೇಮವಲ್ಲ
ನಾಳಿನಾ ಬದುಕಿಗೊಂದು ಭವ್ಯ ಭಾಷ್ಯ ||
ಬಾಳಿನಾ ಕನಸುಗಳಿಗೆ,
ನಿನ್ನ ನಗುವಿತ್ತಿದ್ದು
ಬರಿಯ ಕಲ್ಪನೆಗಳಲ್ಲ,
ಅದು, ಭರವಸೆಯ ಅಲೆ ||
ನಾಳಿನಾ ಜೀವನಕೆ
ನಿನ್ನ ಸಾಂಗತ್ಯದ ಕಲ್ಪನೆಗಳು
ಬರಿದೆ ಆಶ್ವಾಸನೆಯಲ್ಲ,
ಅದು, ಸ್ಪೂರ್ಥಿಯಾ ಸೆಲೆ ||
ನಿನ್ನ ನೆನಪುಗಳು
ನಿನ್ನ ಕುಡಿ ನೋಟದಾ ಶರ,
ನನ್ನ ಹೃದಯಕೆ ಚುಚ್ಚಿ,
ದಿನವು ಅದೆಷ್ಟಾಯ್ತು?
ನಿನ್ನ ನಯನಗಳ ಮಿಂಚು
ನನ್ನ ಕಣ್ಣಂಚಿಗೆ ತಾಕಿ,
ದಿನವು ಅದೆಷ್ಟಾಯ್ತು?
ಕಾಮನಾ ಕಬ್ಬಿನ ತೆರದಿ ಹಬ್ಬಿದ
ಹುಬ್ಬಿನಾಟವ ನೋಡಿ,
ಸಮಯ ಅದೆಷ್ಟಾಯ್ತು?
ಬೀಸುಗಾಳಿಯು ನಿನ್ನ ಘಮವ,
ನನ್ನೆಡೆಗೆ ಹೊತ್ತು ತರಲರಿಯದೆ,
ಸಮಯ ಅದೆಷ್ಟಾಯ್ತು?
ತುಟಿಯ ಮಧ್ಯದಿ ಸೂಸುವಾ
ಮುಗುಳ್ನಗೆಯ ಝ್ಹಳವ ಸವಿಯದೆ,
ಸಮಯ ಅದೆಷ್ಟಾಯ್ತು?
ನೀನಿರದ ಈ ದಿನಗಳು
ನನ್ನೊಳಗಿನ ನಿನ್ನ ಅರಿಯಲು
ನನಗೆ ಉಪಕಾರವಾಯ್ತು !!
ನೀನಿರದ ಈ,
ಕ್ಷಣ ಕ್ಷಣಗಳೂ ಅದೇಕೋ
ಯುಗವಾಗಿ ಭಾಸವಾಯ್ತು !!
ಬಣ್ಣದ ಬದುಕು
ಕಣ್ಣ ಕನ್ನಡಿಯಲ್ಲಿ ಇಂದು
ಕಾಣುತಿಹುದು ನಿನ್ನ ಬಿಂಬ
ಏರಬೇಕು ಮಲ್ಲಗಂಬ
ಸಲ್ಲದೆಂದೂ ನಾನು ನನ್ನದೆಂಬ ಜಂಬ.
ಅವನೇ ಜಗದ ಸೂತ್ರಧಾರಿ
ನೀನು ಇಲ್ಲಿ ಪಾತ್ರಧಾರಿ
ಪ್ರಾಯ ಹೋಗೋ ಮುನ್ನ ಜಾರಿ
ಬೆಳೆಯಬೇಕು ಎಲ್ಲ ಮೀರಿ ..!!
ಇದ್ದರೇನು ಪ್ರಾಯ ಸಣ್ಣ
ಎಲ್ಲ ಹಚ್ಚ ಬೇಕು ಬಣ್ಣ
ನಾವು ಹೆಜ್ಜೆ ಹಾಕಬೇಕು
ತುತ್ತ ಚೀಲ ತುಂಬಬೇಕು.
ಕೆಂಪಾದರೇನು ಕಪ್ಪಾದರೇನು?
ಹೆಚ್ಚಬೇಕು ಪಾತ್ರದಂದ
ಬಣ್ಣಕಿಂತ ನಗುವೇ ಚಂದ
ನಗುವು ಮಾಸದಿರಲಿ ಕಂದ .
ಅವನು ನೋಡುತಿರಲು ಪಾತ್ರ
ಪರಿಗಣಿಪುದು ಪ್ರತಿಭೆ ಮಾತ್ರ
ನಿಜದಿ ತೆರೆವನವನು ನೇತ್ರ,
ಕೈಯಲೇಕೆ ದರ್ಪಣ?
ಬದುಕು ಕಲೆಗೆ ಅರ್ಪಣ..!!
ಏಕಾಂಗಿ ಮನಸು ಮತ್ತು ಅವಳ ಕನಸು

“ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?”. ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬೈಕಿನಲ್ಲಿ ಹೋಗುವಾಗಲೋ, ಇಲ್ಲ ಯಾವುದೊ ಪಾರ್ಕು,ಹೋಟೆಲ್,ಮನೆ,ದೇವಸ್ಥಾನ,ಚರ್ಚ್ ಎಲ್ಲೇ ಈ ಪ್ರಶ್ನೆ ಕೇಳಿದ್ದರೂ, ಉತ್ತರ ಕೊಡುವ ಪ್ರಯತ್ನ ಮಾಡಬಹುದಿತ್ತು. ನ್ಯೂಟ್ರಾನ್,ಪ್ರೋಟಾನ್,ಎಲೆಕ್ಟ್ರಾನುಗಳ ಜೊತೆ ಗಾಡ್ ಪಾರ್ಟಿಕಲನ್ನೂ ಬಳಸಿ, ನ್ಯೂಟನ್ ನಿಯಮಗಳನ್ನು ದ್ವೈತಾದ್ವೈತಗಳ ಜೊತೆ ಮಿಶ್ರಮಾಡಿ ಹೇಳಲು ಪ್ರಯತ್ನಿಸಿ ಹಾದಿ ತಪ್ಪಿಸುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಬೀಸುವ ಗಾಳಿಗೆ ಅಡೆತಡೆ ಉಂಟಾಗಿ, ವೇಗದಲ್ಲಿ ವ್ಯತ್ಯಾಸವಾಗಿ…, ಈ ಬೋಳುಗುಡ್ಡದ ಮೇಲೆ ಇವಳಿಗೆ ಎಂಥ: ‘ವೇವ್ ಥಿಯರಿ’. ನನ್ನಷ್ಟಕ್ಕೆ ನಕ್ಕು ಸುಮ್ಮನಾದೆ.
ನನಗೇನೂ ಇಂಥ: ಪ್ರಶ್ನೆಗಳು ಹೊಸದಲ್ಲ. ಅದೆಷ್ಟೋ ಪ್ರಶ್ನೆಗಳಿಗೆ ಮಹಾಜ್ಞಾನಿಯಂತೆ, ವೇದಾಂತಿಯಂತೆ ವಿವಿಧ ಆಯಾಮಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಗೊತ್ತಿಲ್ಲದ್ದನ್ನು ಗೊತ್ತಿದೆ ಎನ್ನುವಂತೆ ಹೇಳಲು ಹೊರಟು ‘ಪೆದ್ದ’ ಎನ್ನುವ ವಿಶೇಷಣವನ್ನೂ ಪಡೆದಾಗಿದೆ. ಇವಲ್ಲವುದರ ನಡುವೆಯೇ, ಆಕೆಯ ಮುಗ್ದ ನಗುವಿಗೆ, ಸಹಜ ಸಂತಸಕ್ಕೆ ಕಾರಣನಾದೆ ಎನ್ನುವ ಸಂತೃಪ್ತಿಯ ಭಾವ, ಮನಸ್ಸಿಗೆ ಸಿಗುವ ನೆಮ್ಮದಿ, ಖುಷಿ ಎಲ್ಲವನ್ನೂ ಅನುಭವಿಸಿದ್ದೇನೆ.
ಬಿರುಗಾಳಿ, ಸುಳಿಗಾಳಿಗಳಷ್ಟೇ ಅಲ್ಲ, ನಿನ್ನ ಉಸಿರಿನ ಬಿಸಿಗಾಳಿಯೂ ಶಬ್ದ ಮಾಡುತ್ತದೆ. ‘ಅದೊಂದು ರೀತಿಯ ಅಮಲೂ ಸಹ ‘ ಎಂದು ಹೇಳುವ ಪ್ರಯತ್ನ ಮಾಡಿ, ಹೇಳಲಾರದೆ ಸೋತಿದ್ದೇನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡಿ, ದೃಷ್ಟಿ ಯುದ್ದದಲ್ಲಿ ಸೋತು ಸುಣ್ಣವಾಗಿದ್ದೇನೆ. ಪಕ್ಕದಲ್ಲಿ ಕುಳಿತವಳ ಮುಂಗುರುಳು ತಂಗಾಳಿಯ ಜೊತೆ ಚೆಲ್ಲಾಡುವುದನ್ನು ನೋಡಿ, ಸರಿಪಡಿಸಲು ಹೋದ ಕೈ, ಅವಳ ಗದರುವ ನೋಟಕ್ಕೆ ಬೆದರಿ, ನನಗರಿವಿಲ್ಲದೆಯೇ ಹಿಂದೆಗೆದಿದೆ. ಈ ರೀತಿ ವಿಷಯಗಳು ಬಂದಾಗ, ಪ್ರೀತಿ ಪ್ರೇಮಗಳ ಜಗತ್ತಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಧೈರ್ಯ ಜಾಸ್ತಿಯಂತೆ ಹೌದಾ? ನನ್ನ ಪ್ರಶ್ನೆಗೆ ನಗುವೊಂದೇ ಉತ್ತರವಾ? ಅರ್ಥವಾದಳು ಎಂದುಕೊಂಡರೆ ನನ್ನಾಳ ನೀನೇನು ಬಲ್ಲೆ ಎನ್ನುವಂತಹ ನೋಟ?.. ಮತ್ತದೇ ಪ್ರಶ್ನೆ.
“ಹುಡುಗರ ಬಾಳಿನ ಸುಂದರ ಸಂಜೆಗಳನ್ನು ಹಾಳು ಮಾಡಲೆಂದೇ ಈ ಹುಡುಗಿಯರು ಹುಟ್ಟಿರುವುದು”, ಭಗ್ನ ಪ್ರೇಮಿ ಮಿತ್ರನೊಬ್ಬನ ಗೊಣಗಾಟ ಕಿವಿಯಲ್ಲಿ ರಿಂಗಣಿಸಿತು. ಹೌದು ಹೌದು, ನನ್ನದೂ ಸಹಮತವಿದೆ ಎಂಬಂತೆ ತಲೆ ಅಲ್ಲಾಡತೊಡಗಿತು. ಛೆ, ಸುಖಾ ಸುಮ್ಮನೆ ಅಪವಾದ ಹೊರಿಸಬಾರದು. ಅದೆಷ್ಟು ಸಂಜೆಗಳನ್ನು ನಾನು ಇವಳೊಡನೆ ಕಳೆದಿಲ್ಲ? ಈ ಸಂಜೆಗಳಿಗಾಗಿಯೆ ಅದೆಷ್ಟು ಹಗಲು ರಾತ್ರಿಗಳನ್ನು ಕಷ್ಟಪಟ್ಟು ಸವೆಸಿದ್ದೇನೆ. ಲೆಕ್ಕ ಇಟ್ಟವರಾರು? “ನೀನಿಲ್ಲದ ಬದುಕು ಮರುಭೂಮಿ ಕಣೇ” ಎಂದು ಹೇಳಲು ಪ್ರಯತ್ನಿಸಿ ಸೋತಿದ್ದು ಎಷ್ಟು ಬಾರಿಯೋ?. ‘ಮಿಸ್ ಯು……’ ತುಸು ಜೋರಾಗೆ ಹೇಳಿ ಬಿಟ್ಟೆನಾ?. ಈ ಹಾಳಾದ ಕಣ್ಣೀರು, ದುಃಖದಲ್ಲೂ, ಆನಂದದಲ್ಲೂ ಧಾರಾಳವಾಗಿ ಸುರಿಯುತ್ತದೆ. ಇದು ಆನಂದ ಭಾಷ್ಪವಾ?, ದುಃಖಕ್ಕೆ ಬಂದಿದ್ದಾ?. ಇವಳು ಗುರುತಿಸುವ ಮೊದಲೇ ಒರೆಸಿಕೊಂಡು ಬಿಡೋಣ ಎಂದು ಮುಖದತ್ತ ಕರವಸ್ತ್ರ ಒಯ್ದಾಗಲೇ, ತಾನೂ ತೊಟ್ಟಿಕ್ಕುವ ಕಣ್ಣೀರಿನೊಡನೆಯೇ ಹೇಳಿದಳಲ್ಲ, “ಇರಲಿ ಬಿಡು ಗಾಳಿಗೆ ಆರುತ್ತೆ”.
ಯಾಕೆ ಹೀಗೆ ಇವಳು? ನಾನೇ ಹೇಳಲಿ ಎಂದು ಕಾಯುತ್ತಿದ್ದಾಳ? ಇಲ್ಲ ಸುಮ್ಮನೆ ಸತಾಯಿಸುತ್ತಿದ್ದಾಳ? ತುಂಬಾ ಮಾತನಾಡಬೇಕು ಬಾ, ಎಂದು ಕರೆಯುವುದು. ಬಂದಾಗಲೆಲ್ಲ ಇಂಥ: ಪ್ರಶ್ನೆಗಳು, ಇಲ್ಲವಾದರೆ ಮುಗುಳ್ನಗೆ, ಮೌನ, ಮತ್ತೆರಡು ಹನಿ ಅಶ್ರುಧಾರೆ. ‘ಮೂಕ ಪ್ರಾಣಿಗಳೇ ನಮಗಿಂತ ಎಷ್ಟೋ ವಾಸಿ’ ಎಷ್ಟೋ ಬಾರಿ ಅನಿಸಿದ್ದಿದೆ..!. ಸಮುದ್ರ ತೀರ, ನದಿ ದಡ, ಪಾರ್ಕು, ಬಸ್ಸು, ಕಾಲುದಾರಿ, ಈ ಬೋಳುಗುಡ್ಡ, ಯಾವುದನ್ನ ಬಿಟ್ಟಿದ್ದೇವೆ? ಇನ್ನು ಇವಳು ಕರೆದರೆ ಬರಲೇ ಬಾರದು ಎನ್ನುವ ಅದೆಷ್ಟೋ ತೀರ್ಮಾನಗಳನ್ನೂ ಒಂದೇ ಒಂದು ಮೆಸೇಜ್ ಅಳಿಸಿ ಬಿಡುತ್ತದಲ್ಲ!.
“ಏಯ್, ಗಾಳಿ ಏಕೆ ಸದ್ದು ಮಾಡತ್ತೆ ಹೇಳೋ..”. ಕುಳಿತಿರುವ ಒಂದು ಗಂಟೆಯಲ್ಲಿ ಅದೆಷ್ಟನೆ ಬಾರಿ ಕೇಳುತ್ತಿದ್ದಾಳೆ? ಇವತ್ತು ‘ತಬ್ಬಿ ಹಿಡಿದು,ಮೊದಲ ಮುತ್ತಿಟ್ಟು’ ಪ್ರಶ್ನೆಗೆ ಉತ್ತರ ಹೇಳಲೇ ಬೇಕು. ‘ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ?’,….
‘ಮುತ್ತಿಡುವ ಶಬ್ದ ಆಚೆ ಈಚೆ ಕೇಳದಿರಲಿ ಅಂತ..!’.
ಬಲಗಡೆ, ಅವಳು ಕುಳಿತಿರುತ್ತಿದ್ದ ಬಂಡೆ. ಆದರೆ ..,
ಪ್ರಶ್ನೆ ಕೇಳುತ್ತಿರುವುದು ಅವಳಲ್ಲ, ‘ಗಾಳಿಯೇ’.. ಅರಿವಿಲ್ಲದೆಯೇ ತೊಟ್ಟಿಕ್ಕಿದ ಕಣ್ಣೀರು. ಹೌದು, ನನಗೆ ನಾನೇ ಹೇಳಿಕೊಂಡೆ, ‘ಹಾಗೆ ಇರಲಿ ಬಿಡು, ಆರುತ್ತೆ’…..
ವಿ.ಸೂ: ಪಂಜು ಅಂತರ್ಜಾಲತಾಣದಲ್ಲಿ ಈ ಲೇಖನ ಓದಲು ಈ ಕೆಳಗಿನ ಕೊಂಡಿಯನ್ನು ಒತ್ತಿ..
http://www.panjumagazine.com/?p=1356
ಮತ್ತೆ ಅಳಬಾರದು
ಮರುಭೂಮಿಯ ಉರಿಬಿಸಿಲಲ್ಲಿ
ಸುಡುತ್ತಿವೆ ಬೆತ್ತಲೆ ಪಾದಗಳು
ನೆರಳನ್ನರಸಿ ಹೊರಟಿದ್ದೇನೆ
ಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,
ಅಳಬಾರದೆಂಬ ನಿಶ್ಚಯದೊಡನೆ .
ಬರಡು ನೆಲದ ಮೇಲೆ ಬಿರುಗಾಳಿಯಬ್ಬರ
ಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣುಗಳು
ಗುರಿ ಅಸ್ಪಷ್ಟ, ಆದರೂ ಭರವಸೆ,
ಮುಂದೆ ಸಾಗುತ್ತಿದೆ ಪಯಣ
ಅಳಬಾರದೆಂಬ ನಿಶ್ಚಯದೊಡನೆ.
ಕಾನನದ ನಡುವೆ ಕಾರ್ಗತ್ತಲು
ಜೊತೆ, ಮುಂದೇನಾಗುವುದೋ ಎಂಬ ಭಯ,
ಹೆಜ್ಜೆ ಹೊರಳಿದ್ದೇ ದಾರಿ?
ಮಿನುಗು ಹುಳಗಳ ಬೆಳಕಿನಾಶ್ರಯದಲ್ಲಿ,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ.
ಝರಿ ತೊರೆಗಳ ಹಾದಿಯಲ್ಲಿ
ಏರು ತಗ್ಗುಗಳ ಅಡೆತಡೆಯಲ್ಲಿ,
ಮುಳ್ಳು ಗೀರಿನ ಗಾಯಕೆ
ಹಸಿ ಸೊಪ್ಪಿನ ರಸವ ಲೇಪಿಸಿ,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ ..
ಇಳಿಸಂಜೆಯ ಹೊತ್ತಲ್ಲಿ,
ಸಮುದ್ರ ತೀರದ ಬಿಸಿ ಬೀಸುಗಾಳಿಗೆ
ಮುಖವೊಡ್ಡಿ ನಿಂತಿದ್ದೇನೆ
ಕಣ್ಣೀರು ಆರಲೆಂದು,
ಮತ್ತೆ ಅಳಬಾರದೆಂಬ ನಿಶ್ಚಯದೊಡನೆ.
ಜಡಿಮಳೆಗೆ ಮಯ್ಯೊಡ್ಡಿ
ಮಳೆಹನಿಗಳ ಜೊತೆಗೆ ಮತ್ತೆರಡು ಕಂಬನಿಗಳ ಸೇರಿಸಿ
ಗಮ್ಯದತ್ತ ಭಾರವಾದ ಹೆಜ್ಜೆಗಳನ್ನಿಟ್ಟು ಸಾಗುತ್ತಿದ್ದೇನೆ,
ಮತ್ತೆ ಅಳಲೇ ಬಾರದು,
ಅತ್ತರೂ ಇನ್ನಾರೂ ನೋಡಲೇ ಬಾರದು ಎನ್ನುವ ನಿಶ್ಚಯದೊಡನೆ ..!!
ಹನಿಗವನ ?
ಕನಸು (ಹೀಗೆ ಸುಮ್ಮನೆ)
*** *** ***
ಕನಸು ಬಣ್ಣದ ಚಿಟ್ಟೆ
ಮನಸು ನಿನ್ನಲಿ ನೆಟ್ಟೆ
ದಿವಿಯು ಬೆಳಗುವ ಮೊದಲೇ
ಬದುಕು ಮೂರಾಬಟ್ಟೆ !!
ಅಗಲಿಕೆ
*** *** ***
ನೀನಿರದ ಬದುಕು
ಎಣ್ಣೆಯಿಲ್ಲದ ದೀಪ,
ನೀನಿರದ ಹಗಲು
ಬಂಜರು ಬಯಲು,
ನೀನಿರದ ಇಳೆಯಲ್ಲಿ
ಇರಬಹುದೇ ಕಳೆ?,
ನಿನ್ನ ನೆನಪ ಕಣ್ಣೀರಲ್ಲೇ
ತೊಯ್ದಿದೆ ಇಳೆ .
ದಿನಗೂಲಿ
*** *** ***
ಜಾಣ ಎನಿಸಿಕೊಳುವ ತವಕದಲ್ಲಿ
ಮಣ ಭಾರದ ಚೀಲ ಹೊತ್ತು
ಹೋಗುತಿದ್ದೆ ನಾನಂದು ಸ್ಕೂಲಿಗೆ,
ತೊತ್ತ ಚೀಲ ತುಂಬಲೆಂದು
ಭಾರವಾದ ಮಾನವ ಹೊತ್ತು
ಹೋಗುತಿರುವೆ ನಾನಿಂದು ಕೂಲಿಗೆ!!
ಮತ್ತೆ ಮತ್ತೆ ಕಾಡಿದವಳು
ನಿನ್ನೆ ಸಂಜೆಯ ಚಳಿಯಲ್ಲಿ ಆಕೆಯ ನೆನಪು ಕಾಡಿದ್ದು ಹೀಗೆ……..
ನಸುಗತ್ತಲಾ ಈ ಸಂಜೆಯಲ್ಲಿ
ಮನಸಿಗೂ ಇಂದೇಕೋ ಚಳಿ,
ಇರಬಾರದಿತ್ತೇ ನೀನೀಗ
ಇಲ್ಲಿ, ನನ್ನ ಬಳಿ !!
ಕೆಂಬಣ್ಣ ಬಾನಿನಲಿ
ಕಾಣುವುದದೋ ನಿನ್ನ ನೋಟ.
ನೀನೆರೆದು ಹೋದ ಪ್ರೆಮಜಲದಲ್ಲೇ
ಬೆಳೆದು ನಿಂತಿದೆ ನೋಡು ಹೃದಯ ತೋಟ !!
ಬೆಳ್ಳಿ ಚಂದ್ರಮ ಈಗ
ಅಡಗಿ ಕುಳಿತಿಹ ನೋಡು ನಿನ್ನ ನೋಡಿ,
ಶಶಿಗೂ ಮತ್ತೆರಿಸಿರಬಹುದೇ
ನಿನ್ನ ನಗುಮುಖದ ಮೋಡಿ ??
ಕೆಂದಾವರೆಯಂತೆ ಸದಾ
ಅರಳಿರಲು ನಿನ್ನ ಮುಖವು,
ಮತ್ತೆ ಇನ್ನೇನಿದೆ ನನಗೆ
ಬೇರೆ ಸುಖವು ??
ಜೀವನ(ದಿ)
ಜೀವನವಿದು ಏಳು ಬೀಳುಗಳ ಹಾದಿ,
ಬೀಳುವುದೇ ಜಾಸ್ತಿ, ಏಳುವುದು ಕಡಿಮೆ.
ಜೀವನವಿದು ಕಲ್ಲು ಮುಳ್ಳುಗಳ ಹಾದಿ
ಕಲ್ಲೆಸೆಯುವವರೇ ಎಲ್ಲ,
ತೆರವುಗೊಳಿಸುವವರಿಲ್ಲ.
ಬದುಕು ನಿರಂತರ ಪಯಣ,
ಚುಚ್ಚುವುದು ಬರಿಗಳ ನಡಿಗೆಯಲಿ ಮುಳ್ಳು,
ಸಂಭಂದಿಗಳೆಂಬ ನಾಟಕಕಾರರು,
ಕಾಳಿಲ್ಲ ಇಲ್ಲಿ, ಎಲ್ಲವೂ ಜೊಳ್ಳು !!
ಬದುಕು ಅನವರತ ಸತ್ಯದ ಹುಡುಕಾಟ,
ಅನಂತತೆಯೆಡೆಗಿನ ಪಯಣ ನಿಲ್ಲುವವರೆಗೂ ಬರಿ ಕಾದಾಟ.
ಬದುಕು ನಿಂತ ನೀರಲ್ಲ,
ನಿಜ,
ಆದರೆ ಹರಿವ ನೀರಿಗೂ ಅಡೆತಡೆಗಳು ಉಂಟಲ್ಲ..!
ಕೆಲವು ಸ್ವಯಂಭೂತ,
ಹಲವು ಸ್ವಯಂಕೃತ.
ಎಲ್ಲವುಗಳ ನಡುವೆಯೇ ಈ ಜೀವನ ಸಾಗಬೇಕು.
ನೆಮ್ಮದಿಯ ಹೊರತು ಈ ಬದುಕಲ್ಲಿ ಇನ್ನೇನು ಬೇಕು?
(ಕು)ಚುಟುಕುಗಳು
@ಮಾರಾಟದ ಸರಕು@
ಮನೆಯೊಳಗೆ ನಡೆಯುತ್ತಿತ್ತು
ಮಾರಾಮಾರಿ,
ಶಾಂತಿ ಸ್ಪೂರ್ತಿಯೂ ಬಂತು
ಅವಳನ್ನು ಮಾರಿ !!
***
@ಭೂಕಂಪ @
ದಿನವೂ ತೊಪತೊಪನೆ ಉದುರುವ
ಪಾತ್ರೆಗಳ ಸದ್ದಿನೊಡನೆ
ರಾಜಿ ಮಾಡಿಕೊಂಡಾತನಿಗೆ
ಭೂಕಂಪ ಮಹದೆನಿಸಲೇ ಇಲ್ಲ !!
***
ಅವಳ ಜೊತೆಗಿನ ಕ್ಷಣಗಳು
ಬಿಟ್ಟಗಲದಿರು ಗೆಳತಿ
ಜಗದೊಳು ನಾನೋರ್ವ ಒಂಟಿ
ಕಳೆದಿರುವೆ ಅದೆಷ್ಟೋ ಹಗಲಿರುಳು
ಹುಡುಕುತ್ತ ಈ ಮನಕೊಂದು ಜಂಟಿ.
ಅಲ್ಲಷ್ಟು, ಇಲ್ಲಷ್ಟು, ಇನ್ನಷ್ಟು, ಮತ್ತಷ್ಟು
ಇರುವರು ಎಷ್ಟೆಷ್ಟೋ ಮಂದಿ,
ಆದರೂ ಮನವೇಕೊ
ನಿನ್ನಪ್ಪುಗೆಯಾ ಕ್ಷಣಗಳಾ ಕನಸಲ್ಲೇ ಬಂಧಿ..!!
ಕಡುವಾ ಕಣ್ಣೋಟ
ಮರೆಯದಾ ತುಂಟಾಟ,
ಹೋಗದಿರು ನೀ ದೂರದೂರ
ಪೋಣಿಸುವೆ ನಿನಗಾಗಿ, ಇದೋ ಈ ಮುತ್ತಿನಾ ಹಾರ.
ನನ್ನೆದೆಯ ಗೂಡಲ್ಲಿ
ಮಲಗಿರು ನೀನೊಂದು ಹಕ್ಕಿಯಂತೆ,
ಜೊತೆಯಲ್ಲಿ ನಾನಿರಲು
ನಿನಗೇತಕೆ ಜಗದ ಚಿಂತೆ?
ಬಾಳಿನ ದಾರಿಯಲಿ
ಬಂದೊದಗೋ ಸುಖ ಘಳಿಗೆ ,
ಜೊತೆಯಲ್ಲಿ ಇನ್ನೇನು ಬೇಕು?
ನೀನಿರಲು, ನನಗಿದೋ ಅಷ್ಟೇ ಸಾಕು ..!!
ಪ್ರಳಯ
ಪ್ರಿಯಾ,
ವರ್ಷಾಂತ್ಯಕ್ಕೆ ಪ್ರಳಯ,
ಹೋಗುವೆವೆ ನಾವೆಲ್ಲ ಕೊಚ್ಚಿ?
ಎದ್ದಿರುವೆ ನಾನೀಗ ಕನಸಲ್ಲಿ ಬೆಚ್ಚಿ !!
ಪ್ರಿಯೆ,
ಸುನಾಮಿ ಭೂಕಂಪಗಳಿಗೆ
ಹೆದರುವಾತ ನಾನಲ್ಲ,
ಅದೆಷ್ಟು ಪ್ರಳಯಗಳ
ನಾನೀ ಮನೆಯೊಳಗೆ ನೋಡಿಲ್ಲ !!
ಬೀಸದೆಯೆ ಬಿರುಗಾಳಿ
ಎಷ್ಟೊಂದು ಬಾರಿ
ಹೋಗಿಲ್ಲವೇ ಮನೆಯ ಸೂರು
ಧ್ವನಿಯಬ್ಬರಕೆ ಹಾರಿ 🙂
ಒಂದಿಷ್ಟು ಚುಟುಕುಗಳು
ಪ್ರೇಮ ನಿವೇದನೆ
ಹೃದಯ ತೋಟದ
ತಾರೆ
ನಿನಗಿದೋ ಎನ್ನ
ಭಾವಧಾರೆ.
**** **** **** **** ****
ಕನಸು
ಹೃದಯಾಕಾಶದ
ಚುಕ್ಕಿ,
ದೇಹವೃಕ್ಷದಾಲಿಂಗನದಿ
ಪುಟ್ಟ ಹಕ್ಕಿ
**** **** **** **** ****
ಅದೃಷ್ಟ
ಆಕೆಯ ಕಣ್ಣೋಟ
ನನ್ನತ್ತ ಹರಿದಾಗಲೇ
ಸುಳಿದು ಮರೆಯಾಗುವ
ಕೋಲ್ಮಿಂಚು
**** **** **** **** ****
ಕರೆನ್ಸಿ
ಮಿಸ್ಡ್ ಕಾಲ್
ಗೆಳತಿಯು
ಕರೆ ಸ್ವೀಕರಿಸಿದಾಗಲೇ
ಮುಗಿದು ಹೋದ ಹಣ
**** **** **** **** ****
(picture taken from google)
ವ್ಯಾಮೋಹ, ನೀನು ಮತ್ತು ನಾನು
ಬರಹದಲಿ
ಹಿಡಿದಿಡುವ೦ಥ:ದ್ದಲ್ಲ
ಇಂದು ಉಕ್ಕುತ್ತಿರುವ ಈ ಭಾವ ತೀವ್ರತೆಯು.
ಅಬ್ಬರಿಸಿ ಅಡಗಿಹೋಗುವ
ಬಾಂದಳದ ಕಾರ್ಮೋಡದಂತಲ್ಲ
ಇದರ ಉಷ್ಣತೆಯು.
ನಿನ್ನ ಮಾನವ ನೋಯಿಸುವ ಮನಸಿಲ್ಲ
ನೋಯಿಸದಿರುವಂತೆಯೂ ಇಲ್ಲ
ನೋವನುಂಡು ಮರೆವ ಕಾಯ ಇದಲ್ಲವಲ್ಲ.
ಭೋರ್ಗರೆದು ಅಪ್ಪಳಿಸುತಿದೆ
ಭಾವತರಂಗ
ಐಕ್ಯ ಮಂತ್ರವ ಭೋದಿಸುತಿದೆ
ಈ ಅಂತರಂಗ!!
ಸುಟ್ಟರೂ ಬಿಟ್ಟರೂ ಹೋಗುವುದೇ ಹುಟ್ಟುಗುಣ ?
ಮಾತಲ್ಲಿ ಒಂದು, ಕೃತಿಯಲ್ಲಿ ಇನ್ನೊಂದು
ಎನ್ನುವುದೇ ನನ್ನೀ ಅಂತರಾಳದ ಬೇನೆ
ನಿನ್ನ ಸುಡುತಿರುವ ವ್ಯಾಮೋಹಕೆ ಎಲ್ಲಿದೆ ಕೊನೆ?
ನಾನೊಬ್ಬ ಸರಿಯಾದರೆ ಜಗವು ಸರಿಯಾಗಬಹುದೇ?
ಜಗವು ಸರಿಯಾಗುವ ವೇಳೆ, ಯುಗವೇ ಮುಗಿದಿರಬಹುದೇ?
ಎರಡೂ ಕೈ ಸೇರಿದರೆ ತಾನೇ ಚಪ್ಪಾಳೆ?
ಬದುಕಿರಬಹುದೇ ನಾವು, ಇದು ಅರ್ಥವಾಗುವ ವೇಳೆ?
ಎಲ್ಲಿಂದ ??
ಜಾತಿ ರಾಜಕಾರಣದೊಳಗೆ,
ಪ್ರಜಾಪ್ರಭುತ್ವವೆಂಬ ವ್ಯವಸ್ಥೆ
ಗಬ್ಬೆದ್ದು ನಾರತೊಡಗಿದೆ.
ಮಠ ಮಸೀದಿಗಳ ನಡುವೆ
ಚರ್ಚು ಬಸದಿಗಳ ಒಳಗೆ
ಕಾಮ ಕಸ್ತೂರಿ ಕಂಪೊಸರತೊಡಗಿದೆ.
ನ್ಯಾಯ ವ್ಯವಸ್ಥೆಯ ಹೆಸರಲ್ಲಿ
ಅನ್ಯಾಯದ ಬಾಡೂಟಕೆ
ನರಸತ್ತ ಪ್ರಜಾಸತ್ತೆ, ನಾಲಿಗೆ ಚಾಚಿ ನಿಂತಿದೆ.
ಎಂಜಲು ಕಾಸಿಗೆ ಕೈಚಾಚಿ
ಮುಖಕೆ ಮಸಿ ಬಳಿದರೂ ಬುದ್ದಿಬರದ
ಭಿಕ್ಷುಕ ಸಂತಾನ ಸೈತಾನನಾಗಿ ಕೂತಿದೆ.
ಇಂಥ: ವ್ಯವಸ್ಥೆಯೆಂಬ ಅವ್ಯವಸ್ಥೆಯಡಿಯಲ್ಲಿ,
ಬದಲಾವಣೆಯನ್ನು ತುರ್ತಾಗಿ ತರಲೇಬೇಕಿದೆ.
ಆದರೆ,
ಎಲ್ಲಿಂದ??
ಸತ್ಯಾನ್ವೇಷಣೆ !!
ಕಳೆಗುಂದಿದ ಮುಖಗಳು, ನೀರವ ಮೌನ, ಮಧ್ಯೆ ಆಗಾಗ ಅಲ್ಲಲ್ಲಿ ಕೇಳಿಬರುವ ಬಿಕ್ಕಳಿಕೆಯ ಸದ್ದು, ಬೇಸಿಗೆಯ ಬತ್ತಿಹೋದ ಕೊಳದಂತೆ,ಒಣಗಿಹೋದ ಕಣ್ಣಿರು. ಸುತ್ತಲು ಬಂಧು ಬಾಂಧವರಿದ್ದರೂ ಸಂಭ್ರಮಿಸಲಾಗದ (ಸಂಭ್ರಮಿಸಬಾರದ ?) ಏಕೈಕ ಸನ್ನಿವೇಶ ? ಹೌದು , ಅದು ಸಾವಿನ ಮನೆ . ನಿಶ್ಚಲವಾಗಿ, ಇಹದ ಬಂಧನಗಳನ್ನೆಲ್ಲ ತೊರೆದು, ನೀಲ ನಭದೆಡೆಗೆ ಮುಖಮಾಡಿ, ಅಂಗಾತ ಮಲಗಿರುವ ಶವ. ಹುಟ್ಟು, ಬಾಲ್ಯ, ತಾರುಣ್ಯಗಳನ್ನೆಲ್ಲ ದಾಟಿ, ವೃದ್ದಾಪ್ಯದೆಡೆಗೆ ಸಾಗುವಾಗ, ಪಯಣದ ನಡುವೆ ದೊರೆವ ಚಿರಂತನ ನೆಲೆ ಇದು. ಸಾನ್ನಿಧ್ಯ ಎಂದು ಬಲ್ಲವರು ಹೇಳಿದ್ದು ಇದನ್ನೇ ಇರಬಹುದೇ?
ಎಲ್ಲೋ ಹುಟ್ಟುವ ನೀರ ತೊರೆಗಳೆಲ್ಲ ಸೇರಿ, ಹಳ್ಳವಾಗಿ, ನದಿಯಾಗಿ, ಭೂಮಿಯ ದಾಹವನ್ನು ತಣಿಸಿ, ಕೊನೆಗೆ ವಿಶಾಲ ಸಾಗರವನ್ನು ಸೇರುವಂತೆ, ಮಾನವನ ಬದುಕೂ ಜಗದ ಅನಂತತೆಯಲ್ಲಿ ಲೀನವಾಗುವುದೇ? ನಮ್ಮ ಬದುಕನ್ನು ನದಿಗೆ/ನೀರಿಗೆ ಹೋಲಿಸಿದರೆ ಅತಿರೇಕವಾದೀತು. ಯಾಕೆಂದರೆ ಎಲ್ಲ ಜಲಮೂಲಗಳು ಉಪಯುಕ್ತ(ಸಾಗರವಿರದಿದ್ದರೆ ಉಪ್ಪೆಲ್ಲಿ? ). ಇದನ್ನೇ ಮಾನವನಿಗೂ ಅನ್ವಯಿಸಲಾದಿತೆ? “ನ್ಯೂಟನ್ನನ ನಿಯಮಗಳನ್ನು” ಸುಳ್ಳು ಎಂದು ಸಾಧಿಸುವಷ್ಟೇ ಕ್ಲಿಷ್ಟಕರ ವಿಚಾರ ಇದು. “ನೀನಾರಿಗಾದೆಯೋ ಎಲೆ ಮಾನವ” ಎಂಬ ಕವಿಯ ಪ್ರಶ್ನೆಯೂ ಮಾನವನ ಬದುಕಿನ ಸತ್ಯಾನ್ವೇಷಣೆಯಂತೆ ಅನಿಸುತ್ತಿರುವುದು ನಿಜ. ಆದರೆ “ಬೃಹ್ಮ ಸತ್ಯ ಜಗನ್ಮಿಥ್ಯ” ಎಂಬ ಮಾತು ನೆನಪಾದರೆ, ಸುಳ್ಳು ಸತ್ಯವೂ ಆಗಬಹುದು, ಸತ್ಯ ಸುಳ್ಳೂ ಆಗಬಹುದು (ಅಂದರೆ ನಾನಿಲ್ಲಿ ಬರೆಯುತ್ತಿರುವುದು ಸುಳ್ಳೋ ? ನಿಜವೋ?).
ಅರಿಯದೆ ಬರುವ ಸಾವಿಗೂ, ಕಾಯಿಸಿ ಸತಾಯಿಸಿ ಬರುವ ಸಾವಿಗೂ, ಇರುವ ಅಂತರವೇನು? ಒಂದು ಸುಖ(ಸತ್ತವರಿಗೆ ಮಾತ್ರ, ಇರುವವರಿಗಲ್ಲ),ಇನ್ನೊಂದು ದುಖ: (ಇರುವವರಿಗೆ ಮಾತ್ರ, ಸತ್ತವರಿಗಲ್ಲ). ಒಂದು ಪುಣ್ಯವಾದರೆ ಇನ್ನೊಂದು ಪಾಪ. ಮೊದಲನೆಯದನ್ನು ಸೌಭಾಗ್ಯ(?) ಎಂದು ಕರೆದರೆ ಎರಡನೆಯದೇ ದೌರ್ಭಾಗ್ಯ. ಹುಟ್ಟು ಅಥವಾ ಸಾವು ನಮ್ಮ ನಿಯಂತ್ರಣದಲ್ಲಿಲ್ಲ. ಅಂದ್ರೆ ಈ ಎರಡರ ನಡುವಿನ ಅಂತರವನ್ನೇ ಜೀವನ ಎಂದೆವೆ? ಅದನ್ನೇ ಬದುಕು ಎಂದು ಕರೆದೆವೇ? {ಸಾವು – ಹುಟ್ಟು = ಬದುಕು ?}. ಅದೇ ಹೌದಾದರೆ
” ಅವನೇ ಜಗದ ಸೂತ್ರಧಾರಿ , ನಾನು ಇಲ್ಲಿ ಪಾತ್ರಧಾರಿ ” ಎಂದು ಎಲ್ಲವನ್ನು ಪರಮಾತ್ಮನಿಗೆ (ಎನ್ನುವವ ಒಬ್ಬನಿದ್ದರೆ ! ) ಅರ್ಪಿಸಿದ ಹಿರಿಯರ ಚಿಂತನೆಗಳು ಆಧಾರರಹಿತವೆ?. ಈ ಕ್ಷಣಿಕ ಬದುಕೂ ನಮ್ಮ ಕೈಲಿಲ್ಲವೇ? .
ಮಗುವಾಗಿದ್ದಾಗ ಬೆಳೆದು ದೊಡ್ದವರಾಗಬೇಕೆಂಬ ಕನಸು, ಸಾಧನೆಯ ಶಿಖರವನ್ನೆರಬೇಕೆಂಬ ಛಲ, ಯೌವನದಲ್ಲಿ ರೋಷಾವೇಶ, ಮಧ್ಯ ವಯಸ್ಸಿನಲ್ಲಿ ಹೊಂದಾಣಿಕೆಯ ಗುಣ. ಇವನ್ನೆಲ್ಲ ಸಹಜವಾಗಿ ಬೆಳೆಸಿಕೊಳ್ಳುವ ಮಾನವನೆಂಬ ಪ್ರಾಣಿ, ವೃದ್ದಾಪ್ಯದಲ್ಲಿ ಮತ್ತೆ ಯುವಕನಗುವ ಕನಸು ಕಾಣುತ್ತಾನೆ. ಅದು ತನು ಈ ಮೊದಲಿನ ದಿನಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಿಲ್ಲ ಎಂಬ ನಿರಸೆಯೋ? ಅಥವಾ ಪುನ: ಏನನ್ನೋ ಸಾಧಿಸಬೇಕೆಂಬ ಛಲವೋ ಎಂಬುದು ವಯಕ್ತಿಕ ವಿಚಾರ. ಆದರೆ ಎಲ್ಲರೂ ‘ಮರಣ ಮೃದಂಗ ‘ ಬಾರಿಸಲೇ ಬೇಕೆಂಬುದು ಜೀವನದ ಸರಳ ಸತ್ಯ.
ಹುಟ್ಟಿದ್ದೆಲ್ಲವೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬ ಕಹಿ ಸತ್ಯದ ಅರಿವಿದ್ದರೂ, ನಾಳೆಗಳ ಕನಸು ಕಾಣುತ್ತೇವೆ. ಭವಿಷ್ಯ ರೂಪಿಸಲು ಹೆಣಗಾಡುತ್ತೇವೆ. ಹೋರಾಡುತ್ತೇವೆ. ಮತ್ತದೆ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ. ಅದೆಷ್ಟು ಬಂಧು-ಬಾಂಧವರು?, ಮಿತ್ರರು?,ಆಪ್ತರು?,
ಆದರೆ …….,
ಮತ್ತೆ ನೆನಪಾಗುವವನು ಅದೇ ಅಲೆಕ್ಸಾಂಡರ್, ಅದೇ ಸಿದ್ಧಾರ್ಥ, ಯೋಗಿ ಗೌತಮ ಬುದ್ಧ. ಈ ಭೂಮಿಯಲ್ಲಿ ಅದೆಷ್ಟು ಜ್ಞಾನ? ಅದೆಷ್ಟು ಭೋದನೆಗಳು? ನಮ್ಮ ಮೌಢ್ಯವನ್ನು ಹೋಗಲಾಡಿಸಲು ಪಟ್ಟ ಶ್ರಮವೆಷ್ಟು? ನಾವು ಬದಲಾದೆವೆ? ಮತ್ತದೇ ಕಾಡುವ ಗೌಪ್ಯ ಪ್ರಶ್ನೆ ಈ ಬದುಕಿನ ಅರ್ಥವೇನು?
“We are not coming from somewhere else, we are growing within the Existence” ಎಂದು ಓಶೋ ಹೇಳುತ್ತಾರೆ. ಅಂದರೆ ಈ ಸೃಷ್ಟಿ, ಸ್ಥಿತಿ, ಲಯಗಳ ಕತೆ ಏನು?. ಅವೆಲ್ಲವೂ ಮಿಥ್ಯವೆ? ಮತ್ತದೇ “ಜಗನ್ಮಿಥ್ಯ” ನಿತ್ಯ ಸತ್ಯವಾದಂತೆ.(ಸತ್ಯ ಯಾವದು ಮಿಥ್ಯ ಯಾವುದು ಎನ್ನುವ ನಿರಂತರ ಹುಡುಕಾಟ?).
ಸಾವಿನ ಮನೆಯೊಂದನ್ನು ಹತ್ತಿರದಿಂದ ಕಂಡಾಗ, ಮೂಡಿದ ಯೋಚನಾ ಲಹರಿ ಇದು. ಆ ಲಹರಿಯಿಂದ ಹೊರಬಂದು, ಮತ್ತೆ ವರ್ತಮಾನವನ್ನು ಪ್ರವೇಶಿಸಿ, “नैनं छिन्दन्ति शस्त्राणि नैनं दहति पावकः” (Soul never dies) ಎಂಬ ಸಮಾಧಾನದ(?) ಮಾತುಗಳಿಗೆ ಬದ್ಧನಾಗಿ,
”ಮತ್ತದೇ ನಾಳೆಗಳ ಕನಸ್ಸಿನಲ್ಲಿ, ಭವಿಷ್ಯದ ಆಲೋಚನೆಗಳಲ್ಲಿ” !!
ಬಾಳನೌಕೆ
ನಿರರ್ಗಳವಾಗಿ ಧುಮ್ಮಿಕ್ಕಿ
ಹರಿಯಬೇಕಿದ್ದ ಭಾವಬಿಂದು,
ಸಿಂಧುವಿನಂತೆ ಬತ್ತಿಹೋಗಿದೆ .
ನವರಸಗಳ ಸುರಿಸಿ
ಸವಿಜೇನಾಗಬೇಕಿದ್ದ ಪ್ರೇಮದೊರತೆ,
ಬಿಸುಟ ಕಬ್ಬಿನ ಜಲ್ಲೆಯಂತೆ ಒಣಗಿಹೋಗಿದೆ.
ಮಲ್ಲಿಗೆಯಂತೆ ಕಂಪು ಸೂಸಿ
ಮನಕೆ ತಂಪೆರೆಯಬೇಕಿದ್ದ ಒಲುಮೆ
ಪಾಪನಾಶಿನಿ ಗಂಗೆಯಂತೆ ಗಬ್ಬೆದ್ದು ಹೋಗಿದೆ.
ಇಂಪಾದ ಧ್ವನಿಮಾಧುರ್ಯದೊಡನೆ
ಮುದವೀಯಬೇಕಿದ್ದ ಚಿಲುಮೆ
ಅದೇ ಶಬ್ದಮಾಲಿನ್ಯದ ನಡುವೆ ಕಳೆದುಹೋಗಿದೆ.
ಹೃದಯವನ್ನು ಘಾಸಿಗೊಳಿಸಿ
ಮೌಲ್ಯಗಳನು ಕಡೆಗಣಿಸಿ
ಅವರವರ ಬಾಳನೌಕೆ ಮುಂದೆಸಾಗಿದೆ..!!
ಕಾಲ ಮತ್ತು ಮನ
ಗಾಲಿ ಉರುಳುತ್ತಿದೆ
ಬಸ್ಸು ಚಲಿಸುತ್ತಿದೆ
ಸಾವಿರಾರು ಮೈಲಿ ಉದ್ದನೆಯ
ಹಾದಿಯನು ಕ್ರಮಿಸಿ.
ಫಂಕ ತಿರುಗುತ್ತಿದೆ
ಗಾಳಿ ಬೀಸುತ್ತಿದೆ
ಅಮೂಲ್ಯ ಇಂಧನದ
ಮೂಲವನ್ನು ಸವೆಸಿ.
ಮನಸು ಹಾರುತ್ತಿದೆ
ಕನಸು ಕಾಣುತ್ತಿದೆ
ಕಣ್ಣಂಚಲಿ ಕಾಣುವ
ಸುಖವನ್ನು ಅರಸಿ .
ಆಸೆ ಗರಿಗೆದರುತ್ತಿದೆ
ಲತೆಯಂತೆ ಹಬ್ಬುತಿದೆ
ಮನವೆಂಬ ಮರ್ಕಟದ
ದೌರ್ಬಲ್ಯವ ಬಳಸಿ.
ಕಾಲ ಓಡುತ್ತಿದೆ
ಪ್ರಾಯ ಏರುತ್ತಿದೆ
ಪರಿಮಿತ ಜೀವನದ
ಕಾಯವನು ಅಳಿಸಿ.
ದಿನವು ಗತಿಸುತ್ತಿದೆ
ಮನವು ಅಲೆಯುತ್ತಿದೆ
ಜೀವನವೆಂಬಾಟದಾ
ಸಾರ್ಥಕತೆಯ ಬಯಸಿ.
ಒಂದು ಮುತ್ತಿನ ಕಥೆ
ಈ ರಣ ಬಿಸಿಲಿನ ಮಧ್ಯಾಹ್ನ
ಸುಡುತ್ತಿರುವ ದೇಹ.
ಎಂತು ವ್ಯಕ್ತಪಡಿಸಲಿ ನಾ,
ನನ್ನೀ ಪ್ರೇಮ ಭಾವ?
ದಹಿಸುತ್ತಿರುವುದು ದೇಹ ಮಾತ್ರವಲ್ಲ
ಆತ್ಮವೂ ಹೌದು.
ಅದಕೆ ಕಾರಣ ನೂರೊಂದರ ಜೊತೆ,
ನೀನೂ ಇರಬಹುದು!!
ಕೇಳುತ್ತಿರುವೆ ನೀನೀ ಹೊತ್ತು
ಒಂದು ಸಿಹಿಮುತ್ತು.
ಕೊಟ್ಟರೆ ಖಾಲಿಯಾಗುವುದಿಲ್ಲ
ಅದು ನನಗೂ ಗೊತ್ತು !!
ಮನವು ಹಂಬಲಿಸುತಿದೆ
ದೇಹ ಸ್ಪಂದಿಸುತ್ತಿಲ್ಲ.
ಸ್ಪಂದನಾ ಶಕ್ತಿ ಮರುಹುಟ್ಟು ಪಡೆದಾಗ,
ನೀನೆ ಅಲ್ಲಿರಲಿಲ್ಲ!! 
ಹೀಗೊಂದು ಹರಿಕಥೆ
ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ ಚೆನ್ನಾಗಿ ಆಡದಿದ್ದರೂ, ಎದುರಾಳಿ ಪಾಳಯವೇ ಏನಾದರೂ ತಪ್ಪೆಸಗಿ, ಸೋಲಲಿ ಎಂಬ (ಅತಿ?)ಆಸೆ. ನಮ್ಮ ಕಪಿ ಸೈನ್ಯ “ಮೂರ್ಖರ ಪೆಟ್ಟಿಗೆ “ಯ ಮುಂದೆ ಕುಳಿತು “ಸಮಯ ಕೊಲ್ಲುವುದರಲ್ಲಿ ” ನಿರತವಾಗಿತ್ತು. ಸೈನ್ಯದ “ನಾಯಕ ವಾನರ” ಇಲ್ಲದಿದ್ದುರಿಂದಲೋ ಏನೋ, ಸದ್ದು ಗದ್ದಲವಿಲ್ಲದೆ ಕುಳಿತಿದ್ದ ಗುಂಪಿನಲ್ಲಿ ಅದಾಗಲೇ ಇಬ್ಬರು ನಿದ್ರಾ ದೇವಿಗೆ ಶರಣಾಗಿದ್ದರು.
ಇದ್ದಕ್ಕಿದ್ದಂತೆ ಕಾಲಿಂಗ್ ಬೆಲ್ “ಡಿಂಗ್ ಡಾಂಗ್” ಸದ್ದು ಮಾಡಿತು. ಹೋಗಿ ಬಾಗಿಲು ತೆರೆದರೆ, ಕಾಣೆಯಾಗಿದ್ದ ಕಪಿಸೈನ್ಯದ ನಾಯಕ “ಕೆಂಪ” ಪ್ರತ್ಯಕ್ಷನಾಗಿದ್ದ. ಸದಾ ನಗುಭರಿತ ಮುಖದಲ್ಲಿ ಇಂದೇಕೋ ಏನೋ ದುಗುಡ. ” ಏನಾಯ್ತೋ ಕೆಂಪ?. ಹೊಸ ಹುಡುಗೀನೂ ಕೈಕೊಟ್ಲಾ?”, ಪ್ರಶ್ನೆಯ ಬಾಣ ನನಗರಿವಿಲ್ಲದೆಯೇ ಆತನನ್ನು ಕೆಣಕಿತ್ತು. “ಸದಾಶಿವನಿಗೆ ಅದೇ ಧ್ಯಾನ ” ಅದೇನೋ ಅಂತಾರಲ್ಲ ಹಂಗಾಯ್ತು ನಿನ್ನ ಕತೆ. ನಮ್ಮ ಕಷ್ಟ ನಮಗೆ ಎಂಬ ಉದಾಸೀನ ಭಾವದ ಕ್ಷೀಣ ಸ್ವರವೊಂದು ಕೆಂಪನಿಂದ ಹೊರಟಿತು. ಸುಮ್ಮನಿರೋ, ಪಾಪ ಏನೋ ಆಗಿರಬೇಕು, ಏನಾಯ್ತು ಕೇಳೋಣ, ಎಂದು ನಮ್ಮ ಸಂಪೂರ್ಣ ಸೈನ್ಯ ಆತನ ಬೆಂಬಲಕ್ಕೆ ನಿಂತಿತು.
ಅಂಥದ್ದೇನೂ ಇಲ್ಲ ಕಣ್ರೋ, ಆದ್ರೆ ನಾಳೆಯಿಂದ ನಾನು ಮಾತ್ರ ಆ “ಜಿಮ್”ಗೆ ಹೋಗೋದಿಲ್ಲ ಎಂದುಲಿದ ಕೆಂಪ. ಅಂಥದ್ದೆನಾಯ್ತೋ? “ಯಾಕ ಹೀಂಗ ಅದ್ಲಿಕ್ ಹತ್ತಿ?. ತಲಿ ಸಮ ಇಲ್ಲೇನು?. ದುಡ್ಡ ಹೆಚ್ಚಾತೆನಲೇ ಮಗ್ನ ನಿಂಗ?. ಇಲ್ಲಾಂದ್ರೆ ಹನ್ನೊಂದು ಸಾವ್ರ ಕೊಟ್ಟು ಮೊನ್ನಿ ಮೊನ್ನಿ ‘ಜಿಮ್’ ಸೇರಿದಿ. ಇವತ್ ಬಿಡಾಕ್ ಹತ್ತಿ. ನೀ ಕೆಲ್ಸಾ ಮಾಡೋ ಕಂಪನಿ ಏನರ ನಿಂಗ್ ರೊಕ್ಕ ಪುಕ್ಶಟಿ ಕೊಡ್ತೈತೇನು? ಕಟ್ಟಿ ದುಡ್ಯುಹಾಂಗ ದುಡಿಸ್ತಾರು, ಬಿಕ್ಷೆ ಕೊಟ್ಟಂಗ್ ಕಾಸ್ ಕೊಡ್ತಾರು. ಇಲ್ ನೋಡಿದ್ರ ನೀ ಮಂಗ್ಯಾ ನನ್ ಮಗ ಅಡಿದಂಗ ಆಡಾಕ್ ಹತ್ತಿ. ೧೧ ಸಾವ್ರ ಅಂದ್ರೆ ಏನು ಕಡಮಿ ಅಂತೆ ತಿಲ್ದಿದ್ಯೇನೋ?” ಪಕ್ಕ ಉತ್ತರ ಕರ್ನಾಟಕ ಭಾಷೆಯಲ್ಲಿ ಕೆಂಪನನ್ನು ದಬಾಯಿಸಿದ ಸಂತ್ಯಾ.
ಏನಾಯ್ತು ನೀ ಹೇಳೋ ಮೊದ್ಲು. ಉಳ್ಡಿದೆಲ್ಲ ಆಮೇಲೆ ಎಂದು ನಾನು ಕೆಂಪನನ್ನು ವಿಚಾರಿಸುತ್ತಿದ್ದಂತೆ, ಕೆಂಪನ ಕಥಾ ಪ್ರವಾಹ ಶುರುಗೊಂಡಿತು.
” ಹಿಂದಿನ ವಾರ ನಾನು ಹೊಸದಾಗಿ ‘ಜಿಮ್’ ಸೇರಿದೆ ತಾನೇ? ಅಲ್ಲಿ ನಾನು ಮಾತ್ರ ಹೊಸಬ. ಉಳಿದವರೆಲ್ಲ ಈಗಾಗಲೇ ಆರೆಂಟು ತಿಂಗಳು ಬೆವರು ಹರಿಸಿ, ಚೆನ್ನಾಗಿ ಬೆಳ್ದಿದಾರೆ. ಇಷ್ಟು ದಿನ ನೀವು ನನ್ನ ಹೊಟ್ಟೆ ಮೇಲೆ ‘ಕಾಮೆಂಟ್’ ಹೊಡೆದು ‘ಜಿಮ್’ ಸೇರೋ ಹಾಗಿ ಮಾಡಿದ್ರಿ. ಇಗ ಅವರೆಲ್ಲ ಸೇರಿ ಮತ್ತೆ ನನ್ನ ರೆಗಿಸ್ತಾರೆ ” ಎಂದುಲಿದ ಕೆಂಪ.
‘ಸ್ವಾತಿ’ ಹೋಗ್ತಾಳಲ್ಲ ಅದೇ ಜಿಮ್ ತಾನೇ ನೀನೂ ಸೇರಿರೋದು? ಎಂದು ನಾನು ಕೇಳಿದೆ.
ಅವಮಾನದಿಂದ ಕೆಂಪಾದ ತನ್ನ ಮುಖಾರವಿಂದವನ್ನು ,ಹೌದೆಂಬಂತೆ ಅಲ್ಲಾಡಿಸಿದ ಕೆಂಪ.
“ಓಹೋ ಇದ ಸಮಾಚಾರ? ಆಕೆ ಒಮ್ಮೆ ಕಿಸಕ್ ಅಂತ ನಕ್ಕಿದ್ದಕ್ಕೆ ಇಷ್ಟೊಂದ್ “ಫೀಲ್” ಆಗಾಕ್ ಹತ್ತಿಯಲ್ಲೋ. ನಾವ್ ಎಷ್ಟ್ ಹೇಳಿದರೂ ತಲೆ ಕೆಡಿಸಿಕೊಳ್ಳದೆ ಕುಳ್ತಿದ್ದೆ, ಗುಂಡು ಕಲ್ಲಿನ ಥರ” ಎಂದು ಉರಿವ ಬೆಂಕಿಗೆ ತುಪ್ಪ ಸುರಿದ ಆನಂದು.
“ನೋಡ್ರಪ್ಪ ಹೊಟ್ಟೆ ಎನ್ನುವುದು ಗೌರವದ ಸಂಕೇತ. ದೊಡ್ಡಸ್ತಿಕೆಯ ಸಂಕೇತ. ಅಲ್ಪ ಸ್ವಲ್ಪ ಹೊಟ್ಟೆ ಇದ್ದು , ಬಿಳಿ ಬಟ್ಟೆ ಹಾಕ್ಕೊಂಡು ಓಡಾಡಿದ್ರೆ, ಜನ “ರಾಜಕಾರಣಿ” ಅಂತ ಗುರ್ತಿಸ್ತಾರೆ. ಗೌರವ ಜಾಸ್ತಿ. ಅಲ್ದೆ ಪೋಲಿಸ್ ಕೆಲಸಕ್ ಏನಾದರೂ ಸೇರ್ಕೊಂಡ್ರೆ ಹೊಟ್ಟೆ ಇಲ್ದಿದ್ದ್ರೆ ಒದ್ದು ಹೊರಗಡೆ ಹಾಕ್ತಾರೆ ಅಂತ ಕಾಣ್ಸುತ್ತೆ. ದೊಡ್ಡ ಹೊಟ್ಟೆ, ಉದ್ದ ಮೀಸೆ ಇರೋ ಪೋಲಿಸ್ ಆದ್ರೆ, ಬಿಟ್ಟಿ ಸೆಲ್ಯೂಟ್ , ಜೊತೆ ಫ್ರೀ ಆಗಿ ಟೀ, ಕಾಫಿ ಎಲ್ಲ ಸಿಗುತ್ತೆ. ಪೋಲಿಸ್ ಆಗಿ ನರಪೇತಲನಥರ ಇದ್ರೆ “ಲಂಚ” ಹೋಗ್ಲಿ “ಫ್ರೀ ಲಂಚ್” ಕೂಡ ಸಿಗಲ್ಲ ಗೊತ್ತೇನು?. ನೀ ಪೋಲಿಸ್ ಆಗ್ಲಿಕ್ ಲಾಯಕ್ ಇದ್ದಿ ಕೆಂಪಾ ಬಿಡು” ಎಂದು ಅವನ ಬೆಂಗಾವಲಿಗೆ ನಿಂತ ಹರಿ.
“ಅಷ್ಟೂ ಅಲ್ದೆ ಹೊಟ್ಟೆ ಮಹತ್ವಾನ ನೀ ಏನೂಂತ ತಿಳ್ಡಿದಿ? ಈಗಿನ ಕಾಲ ಬಿಟ್ಟು, ಪುರಾಣ, ರಾಮಾಯಣ , ಮಹಾಭಾರತದ ಕಲ ನೋಡಿದರೂ ಹೊಟ್ಟೆ ಎಷ್ಟು ಮುಖ್ಯ ಪಾತ್ರ ವಹಿಸಿತೂ ಅಂತ ಗೊತ್ತಾಗುತ್ತೆ. ಮಹಭಾರತದಲ್ಲಿ ಬಲಶಾಲಿ ಅಂದ್ರೆ ಯಾರಪ್ಪಾ? ಭೀಮ ತಾನೇ? ಅವನಿಗೇನು ಕಡಮೆ ಹೊಟ್ಟೆ ಇತ್ತ? ಒಂದೆತ್ತಿನಗಾಡಿ ಪೂರ್ಣ ಆಹಾರ ಒಬ್ಬನೇ ತಿನ್ದವ್ನಲ್ಲವ ಅವನು? ಶಕ್ತಿ ಸಾಮರ್ಥ್ಯದ ಪ್ರತೀಕ ಈ ಹೊಟ್ಟೆ!!”
“ಪುರಾಣ ಎಲ್ಲ ಮರೆತು ನಮ್ಮ ಕಲಿಯುಗಕ್ಕೆ ಬಂದರೂ,ಹೊಟ್ಟೆ ಯಾ ಮಹತ್ವ ಮಾತ್ರ ಕಡಿಮೆ ಆಗಿಲ್ಲ. ನಮ್ಮ “ಸ್ಯಾಂಡಲ್ ವುಡ್” ಹೀರೋಗಳನ್ನ ನೋಡು, ಎಷ್ಟು ದೊಡ್ಡ ಹೊಟ್ಟೆ ಇಟ್ಟಿರ್ತಾರೆ. ಆದರೆ ಒಂದೇ ಏಟಿಗೆ ೪-೪ ಜನರನ್ನ ಹೊಡೆದು ಉರುಳಿಸ್ತಾರೆ. (ರೀಲೋ ರಿಯಲ್ಲೋ ಎನ್ನುವುದು ಮುಖ್ಯ ಅಲ್ಲ!!) ತುಂಬಾ ದೊಡ್ಡ ಅಲ್ಲ ಅಂದ್ರೂ, ಸ್ವಲ್ಪವಾದರೂ ಹೊಟ್ಟೆ ಇರಬೇಕು. ಅದು ಗಂಡಸರ ಜಾತಿಯ ಒಂದು “ಐಡೆಂಟಿಟಿ ” ಇದ್ದ ಹಾಗೆ ತಿಳಿತಾ?. “ಮೇಲ್”ಗಳ ಹೊಟ್ಟೆಗಿಂತ “ಫಿಮೆಲ್ “ಗಳ ಹೊಟ್ಟೆ ಇನ್ನೂ ಮೇಲು!!. ಅಮ್ಮ ಒಂಬತ್ತು ತಿಂಗಳು ನಿನ್ನನ್ನ ಆ ಗುಡಾಣದಂತ: ಹೊಟ್ಟೆಯಲ್ಲಿ ಇಟ್ಕೊಂಡು ಜೋಪಾನ ಮಾಡದಿದ್ದರೆ ನೀನು ಭೂಮಿ ಮೇಲೆ ಇವತ್ತು ಇರ್ತಿರ್ಲಿಲ್ಲ !!. ಅದಕ್ಕೆ ಇರಬೇಕು ದಾಸರಂತ ದಾಸರೇ “ಎಲ್ಲಾರು ಮಾಡುವುದು ಹೊಟ್ಟೆಗಾಗಿ “ಅಂತಾ ಹೇಳಿದ್ದು. ಅದರಪಾಡಿಗೆ ಅಡಿರುತ್ತೆ ಬಿಡು, ಪಾಪ ಹೊಟ್ಟೆ ” ಎಂದು ಹರಿ ಕೆಂಪನನ್ನು ಸಮಾಧಾನಪಡಿಸಲು ಯತ್ನಿಸಿದ!!.
“ಅಂದ್ರೆ ಈ ಹೊಟ್ಟೆ ಹೊತ್ಕೊಂಡೆ ಬದ್ಕು ಅಂತೀರೇನು?. ಇಲ್ಲಾ ಅದೆಲ್ಲ ಆಗಲ್ಲ. ಹೊಟ್ಟೆ ಕಡಮೆ ಮಾಡಬೇಕು ಅಂತಾನೆ ರಾತ್ರಿ ಊಟ ಬಿಟ್ಟಿದೀನಿ!! ನಾನ್-ವೆಜ್ ಕೂಡ ತಿಂತಿಲ್ಲ, ೬ ತಿಂಗಳಾಯ್ತು. ಎಷ್ಟ್ ಕಷ್ಟ ಪಡ್ತಿದೀನಿ ಗೊತ್ತ? ಹೊಟ್ಟೆ ಕರ್ಗಿಸ್ಲೆ ಬೇಕು ಅಂತ ನಿರ್ಧಾರ ಮಾಡಿ ಜಿಮ್ ಸೇರ್ಕೊಂಡಿರೋದು” ಪುಂಖಾನು ಪುಂಖವಾಗಿ ತನ್ನೆಲ್ಲ ಶಕ್ತಿ ಪ್ರಯೋಗಿಸಿ ದುಃಖವನ್ನು ಹೊರಗೆಡವಿದ ಕೆಂಪ.
“ನಾನ್ವೆಜ್ ಬಿಟ್ಟಿದೀನಿ ಅಂದ್ಯಲ್ಲ. ಬೆಳಿಗ್ಗೆ ತಿಂಡಿ ತಿನ್ನೋಣ ಅಂತ ಕರ್ದಾಗ ಬರ್ಲಿಲ್ಲ ನೀನು! ಮೊಟ್ಟೆ ಬೇಯ್ಸಿ ಉಪ್ಪು ಖಾರ ಹಾಕ್ಕೊಂಡು ತಿಂತಿದ್ದೆ!! ಮೊಟ್ಟೆ ಏನು ಗಿಡದಿಂದ ಬರ್ತಿದ್ಯೆನ್ರಪ್ಪ?. ಯಾರದ್ರೂ ನೋಡಿದ್ರ?. ನಮೂರ್ನಲ್ಲೆಲ್ಲ ಕೋಳಿ ಮೊಟ್ಟೆ ಇಡುತ್ತೆ. ಈ ಬೆಂಗಳೂರು “ಐಟಿ-ಬೀಟಿ” ಸಿಟಿ ಅಂತ ಮೊಟ್ಟೆ ಏನು ಮರದಿಂದ ಬರೋಹಾಗೆ ಮಾಡಿದರೇನು ನಮ್ಮ “ಬಿಟಿ” ವಿಜ್ಞಾನಿಗಳು ?. ನೀ ಮೊಟ್ಟೆ ತಿಂದರೆ ನನಗೇನೂ ಹೊಟ್ಟೆ ಕಿಚ್ಚಿಲ್ಲ . ಆದರೂ ಅನುಮಾನ ಶಮನಕ್ಕಾಗಿ ಕೇಳಿದೆ ” ನಾನೆಂದೆ.
ನಾ ತಿನ್ನೋ ಮೊಟ್ಟೆ ವೆಜ್ ಕಣ್ರಪ್ಪ. “ಫಾರಂ ಕೋಳಿ ” ಮೊಟ್ಟೆಯಲ್ಲಿ ಮರಿ ಆಗಲಿಕ್ಕೆ ಬೇಕಾದ ಗುಣ ಇಲ್ಲವಂತೆ. ಮತ್ತೇನೇನೋ ಕಾರಣ ನೀಡಿ ಅಮೇರಿಕ ವಿಜ್ಞಾನಿಗಳೇ ಮೊಟ್ಟೆ ವೆಜ್ ಅಂತ ತೋರಿಸಿದ್ದಾರೆ ಎಂದ ಕೆಂಪ. ನಮಗೆ ಗೊತ್ತಿರೋ ಹಾಗೆ ಪ್ರಾಣಿಜನ್ಯ ಆಹಾರವನ್ನು “ನಾನ್ ವೆಜ್ ” ಅಂತ ಕರಿತೀವಿ ತಾನೆ? ಎಂದು ಕೇಳಿದೆ.
ಪ್ರಾಣಿಯಿಂದ ಬರೋದೆಲ್ಲ ನಾನ್-ವೆಜ್ ಅನ್ನೋ ಹಾಗಿದ್ರೆ ಹಾಲು ಮೊಸರು ಎಲ್ಲ ನಾನ್-ವೆಜ್ ಆಗಬೇಕಲ್ಲ. ಅದನ್ನ ಯಾಕೆ ವೆಜ್ ಅಂತ ಕರಿತಾರೆ? ಎಲ್ಲಿಂದ ಬಂದ್ರಿ ಸಾರ್ ತಾವು? ಕೆಂಪು ಬಸ್ ಹತ್ಕೊಂಡು, ಬಾ ಅಂದ ತಕ್ಷಣ ಬಂದ್ಬಿಡೋದ? ಸ್ವಲ್ಪ “ಜನರಲ್ ನಾಲೆಜ್ ” “ಇಂಪ್ರೂವ್” ಮಾಡ್ಕೋ ಹೋಗು ಎಂಬ ಫ್ರೀ ಸಲಹೆ ತೇಲಿಬಂತು. ಹೊಡೆಯುವವನ ಕೈಲಿ ಕೋಲು ಕೊಟ್ಟು ಹೊಡೆಸಿಕೊ೦ಡ೦ತಾಯ್ತು ನನ್ನ ಪರಿಸ್ಥಿತಿ ಎಂದು ಗೊಣಗುತ್ತ ಸುಮ್ಮನೆ ಕುಳಿತೆ.
ಅಷ್ಟರಲ್ಲೇ ಅಪದ್ಭಾನ್ಧವನಂತೆ ಮಧ್ಯ ಪ್ರವೇಶಿಸಿದ ಸಂತ್ಯಾ , ಏನ್ರಪ್ಪಾ ನಿಮ್ಮ ಕಿತ್ತಾಟ. ಅವಾಗಿಂದ ನೋಡ್ತಿದೀನಿ. ಕೋಳಿ ಅಂತೆ, ಮೊಟ್ಟೆ ಅಂತೆ, ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲೇನು ಎಂದು ನಯವಾಗಿ ಗದರಿದ. ಅನುಮಾನ ಇಟ್ಕೊಂಡ್ ಬದುಕಬಾರದು ಅಂತ ತಿಳಿದವರು ಹೇಳ್ತಾರೆ. ಅದ್ಕೆ “ಜಸ್ಟ್ ಡೌಟ್ ಕ್ಲೀಯರಿಂಗ್ ” ಎಂದು ನನ್ನನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದೆ.
“ಅನುಮಾನದ ಮನೆ ಹಾಳಾಗ್ಲಿ. ಈ ಕೆಟ್ ಅನುಮಾನ ಹುಟ್ಟಿ ದ್ರಿಂದಲೇ , ಸೀತಾ ಮಾತೆ “ಅಗ್ನಿ ಪರೀಕ್ಷೆ” ನಡೆದದ್ದು. ನೋಡು ತಮ್ಮಾ, ಈ ಜಗತ್ನಾಗೆ ಅದು ಬೇರೆ ಇದು ಬೇರೆ, ಅದು ಒಳ್ಳೇದು, ಇದು ಕೆಟ್ಟದ್ದು ಅಂತೆಲ್ಲ ವಿಂಗಡಣೆ ಮಾಡಿದವರು ಯಾರು?. ನಾವೇ ತಾನೇ? ಹಾಂಗೆ ಈ ವೆಜ್ ನಾನ್-ವೆಜ್ ಕತೀನು ಐತಿ. ಅದು ವೆಜ್ , ಇದು ನಂ ವೆಜ್ ಅಂತ ವಿಂಗಡಣೆ ಮಾಡ್ಕೊಂದವ್ರು ಯಾರು ? ನಮ್ಮವರೇ ಅಲ್ವಾ?. ಹೀಂಗ ವಿಂಗಡಣೆ ಮಾಡ್ಕೊಂಡ್ ನಾವು ಎಷ್ಟ್ ಶಾಣ್ಯಾ ಅದೀವಿ ಅಂದ್ರ, ಅದೇ ಗುಂಪುಗಳನ್ನ ನಮಗೆ ಬೇಕಾದಾಗ ಬದ್ಲಾಯ್ಸೋ ಅವಕಾಶನೂ ಇಟ್ಕೊಂಡಿದೀವಿ. ಜಗತ್ತಲ್ಲಿ ಸ್ವಲ್ಪ ಓದಿ ಬುದ್ದಿವಂತರು ಅಂತ ಅನಿಸಿಕೊಂಡವರು, ತಮಗೆ ಮಾಡಲಿಕ್ ಕೆಸಲ ಇಲ್ದಿದ್ದಗ್ ಇಂತದ್ದನ್ನೇ ಮಾಡೋದು. ವಾದ ವಿವಾದ ಮಾಡಲಿಕ್ ಒಂದು “ಸಬ್ಜೆಕ್ಟ್ ” ಬೇಕಲ್ಲವ ಅವ್ರಿಗೆ?. ಇನ್ನು ಉತ್ತರ ಭಾರತದ ಕಡೆ ಹೋಗಿ, ಗಂಗಾ ತೀರದ ಬ್ರಾಹ್ಮಣರನ್ನ ಕೇಳಿ, ಅವ್ರು ಮೀನನ್ನು ಸಸ್ಯಾಹಾರ ಅಂತಾನೆ ಭಾವಿಸ್ತಾರೆ. ಹೋಟೆಲ್ಗ್ ಹೋಗಿ “ವೆಜ್ ” ಊಟ ಕೊಡಪ್ಪ ಅಂದ್ರೆ ತಟ್ಟೆ ತುದಿಯಲ್ಲಿ ಮೀನು ಗ್ಯಾರಂಟೀ ಅಂತೆ ಗೊತ್ತೇನು?” . ನಮಗೆ ಬೇಕಾದ ಹಾಗೆ ರೂಲ್ಸ್ ಮಾಡ್ಕೊಂಡು, ಅದನ್ನೇ ಶಾಸ್ತ್ರ ಪುರಾಣ ಅಂತ ನಾಟ್ಕ ಮಾಡ್ತೀವಿ. ನೀನೇನು ತಲಿ ಕೆಡ್ಸ್ಕೊಬೇಡ. ಅಲ್ಲೋ ಕೆಂಪಾ, ನಾನ್-ವೆಜ್ ತಿಂದರೆ ಹೊತ್ತಿ ಬರುತ್ತೆ ಅಂತ ಯಾರು ಹೇಳಿದ್ರಪ್ಪ ನಿಂಗೆ?. ತಿಂದ್ಕೊಂಡು ಮೈ ಬಗ್ಸಿ ದುಡಿದರೆ ಹೊತ್ತಿ ಅಲ್ಲ ಏನೂ ಬರಂಗಿಲ್ಲ. ಬಕಾಸುರನಾಂಗ ತಿಂದ್ಕೊಂಡು ಕೆಲಸ ಮಾಡಂಗಿಲ್ಲ ಅಂದ್ರ ಏನ್ ತಿಂದರೂ ಹೊತ್ತಿ ಬೆಳಿತೈತಿ ತಮ್ಮಾ .” ಎಂದು ವೇದಾಂತಿಯಂತೆ ಸುದೀರ್ಘ ಭಾಷಣ ಬಿಗಿದ ಸಂತ್ಯಾ .
“ಹೊಟ್ಟೆ ಅಂದರೆ ಏನಂತ ತಿಳಿದಿದ್ದಿಯ. ಅಲ್ನೋಡು ನಮ್ಮ ಕ್ರಿಕೆಟ್ ಟೀಮು. ಹೊಟ್ಟೆ ಇಲ್ದಿರೋದು ಯಾರಿದ್ದಾರೆ ಹೇಳು?. ಎಲ್ಲರ ಮೂಗಿಗೂ ಒಂದೊಂದು ಚಿಕ್ಕ ಸೊಂಡಿಲ ಹಚ್ಚಿ ಬಿಟ್ಟರೆ ಮುಗಿತು, ಚೌತಿ ಹಬ್ಬದ ಗಣೇಶನಂತೆ ಕಾಣಿಸ್ತಾರೆ ಎಲ್ಲರು. ಗ್ರೌನ್ದಲ್ಲಿ ಬಾಲ್ ಹಿಡಿರೊ ಓಡ್ರೋ ಅಂದ್ರೆ ಬೆಳಿಗ್ಗೆ ಎದ್ದು ‘ ಜಾಗಿಂಗ್ ‘ ಹೊಗೊರ್ತರ ಓಡ್ತಾರೆ. ಅಷ್ಟಕ್ಕೇ ಅವ್ರಿಗೆ ಕೋತಿ ಕೋತಿ ಪಗಾರ್ ಬೇರೆ ಸಿಗತ್ತೆ. ಇರಲಿಬಿಡು ಹೊಟ್ಟೆ , ‘ ಐಪಿಎಲ್ ‘ ಟೀಮಿಗಾದ್ರೂ ಪ್ರಯತ್ನ ಮಾಡ್ತಿಯಂತೆ” ಎಂದು ಅಶೋಕ ಪಟಪಟನೆ ಸಾಸಿವೆಯಂತೆ ಸಿಡಿದ.
ಅಷ್ಟರಲ್ಲಾಗಲೇ ಆಷ್ಟ್ರೇಲಿಯಾ ತಂಡದ ‘ಡೇವಿಡ್ ವಾರ್ನರ್ ‘ ಒಂದು ಭರ್ಜರಿಯಾದ ಬೌಂಡರಿ ಹೊಡೆದಿದ್ದ. ಬಾಲ್ ತನ್ನ ಪಕ್ಕದಲ್ಲೇ ಹಾಡು ಹೋದರೂ ಅದನ್ನು ಹಿಡಿಯಲಾಗದೆ, ಕ್ಷೇತ್ರರಕ್ಷಕನೊಬ್ಬ ತಿನುಕಾಡಿದ್ದ(ಹೆಸರು ಬೇಡ !!).
“ಥೂ ನನ್ಮಗನ ಹೊಟ್ಟೆ ನೋಡು. ಎಮ್ಮೆಥರ ಬೆಳೆದಿದ್ದಾನೆ. ಸ್ವಲ್ಪ ಬಗ್ಗಿ ಬಾಲ್ ಕೂಡ ಹಿಡಿತಿಲ್ಲ” ಎಂದು ಕೆಂಪ ತನ್ನ ಹೊಟ್ಟೆಯ ಗಾತ್ರದ ಪರಿಯನ್ನು ಮರೆತು ಉಗಿದ. ಅವನ ಹೊಟ್ಟೆಯನ್ನು ನೋಡಿ (ಮುಖವನ್ನು ನೋಡಲಾರದೆ ?) ನಗು ತಡೆಯಲಾರದೆ, ನಾವು ಎದ್ದು ಒಳನಡೆದವು.
ಬೃಂದಾವನ
(ನಾವು ಒಮ್ಮೊಮ್ಮೆ ಜೀವನ ಬಹುಮುಖ್ಯ ವಸ್ತುವನ್ನು ಕಳೆದುಕೊಂಡಾಗ, ಎಲ್ಲ ಘಟನೆಗಳಲ್ಲೂ , ಆ ಕಳೆದು ಹೋದ ಅಮೂಲ್ಯ ವಸ್ತುವಿನ ಶೋಧವೇ ಮುಖ್ಯವಾಗಿಬಿಡುತ್ತದೆ. ಕಳೆದು ಹೋದ ವ್ಯಕ್ತಿಯ ಮೌಲ್ಯ ಅರಿವಾಗುವುದು ಅಗಲಿಕೆಯಲ್ಲಿ ಮಾತ್ರ !!. ರಾಧೆಯ ಮನವೂ ಕೃಷ್ಣ ಕಾಣದಿದ್ದಾಗ ಪರಿತಪಿಸುತ್ತಿತ್ತೆ? ಕೃಷ್ಣನ ಅಗಲಿಕೆಯ ನೋವಿನಿಂದ ಬಳಲಿರುವ ರಾಧೆಯ ಮನಸ್ಸು ಎಲ್ಲೆಲ್ಲೂ ಕೃಷ್ಣ ರೂಪವನ್ನೇ ಹುದುಕುತ್ತಿತ್ತೆ?. ಇಲ್ಲಿದೆ ರಾಧೆಯ ಮನಕ್ಕೊಂದು ಅಕ್ಷರ ರೂಪ.)
ನೀಲಾಕಾಶದಿ,
ನೀಲ ಮೇಘ ಶ್ಯಾಮನೋಮ್ಮೆ ಕಾಣಬಾರದೆ?
ಹೃದಯಾಕಾಶದಿ,
ಚಿತ್ತಾಪಹಾರಿಯ ಚಿತ್ರವೊಮ್ಮೆ ಮೂಡಬಾರದೆ?
ನೀಲ ನೆತ್ರನ ನಗುವು ಇಂದೇಕೋ ಕೇಳದಾಗಿದೆ,
ಮೊರೆತ ಮಾತ್ರ ಎಂದಿನಂತೆ ಹಾಗೆ ಉಳಿದಿದೆ !!
ನಗುವಿನಲ್ಲೂ ಅಳುವಿನಲ್ಲೂ ನಿತ್ಯವರ್ಣನೆ,
ಮನವು ಬಯಸುತಿಹುದು ಮತ್ತೆ ಅವನ ಬಣ್ಣನೆ !!
ಗಿರಿಕಂದರ ಶಿಖರಗಳಲೂ ಅವನ ರೂಪವೇ,
ಈ ಮುಗ್ಧ ಮಗುವ ಮೇಲೆ ಅವಗೆ ಕೋಪವೇ?
ಈ ಸ್ನಿಗ್ಧ ಚಲುವೆಲ್ಲ ಅವನದಲ್ಲವೇ ?
ಚಲುವನಿತ್ತ ಇನಿಯ ಮತ್ತೆ ಅವನೇ ಅಲ್ಲವೇ?
ಅಂದಮೇಲೆ ಮತ್ತೆ ಗೋಪ ಬಂದೆ ಬರುವನು,
ಬೃಂದಾವನಕೆ ಮತ್ತೆ ನಗುವ ತಂದೆ ತರುವನು !!
ಆತ್ಮ ನಿವೇದನೆ (ಆತ್ಮ ನೀ – ವೇದನೆ?)!
( ಪ್ರತಿಯೊಬ್ಬರಿಗೂ ತನ್ನದೇ ಅದ ಕನಸುಗಳಿವೆ. ಜೀವನದ ಭವಿತವ್ಯದ ಹಂಬಲವಿದೆ . ಸುಂದರ ನಾಳೆಗಳ ನೀರಿಕ್ಷೆ ಇದೆ. ಬೆಳವಣಿಗೆಯ ಹಂತದಲ್ಲಿ ಜೀವನದ ಸಾರ್ಥಕತೆಯ ಪ್ರಶ್ನೆಯೂ ಆಗಾಗ ಕಾಡುವುದು ಸ್ವಾಭಾವಿಕ. ನನ್ನೊಳಗಿನ ಪ್ರಶ್ನೆಗಳು ಇಲ್ಲಿ ಕವನ ರೂಪದಲ್ಲಿ.)
ಯಾರೋ ಎಳೆದುಹೋದ ಪರದೆಯಂತೆ
ಮುಸುಕಿದಾ ಮಾಯೆ,
ಬಿಟ್ಟೆನೆಂದರೂ ಬಿಡದೀ
ಬೇಗುದಿಯ ಛಾಯೆ.
ಎಲ್ಲೋ ಹುಟ್ಟಿ ಎಲ್ಲೋ ಹರಿವ
ತೊರೆಗಳಂತೆ ಬದುಕು,
ಬುದ್ದಿಹೀನ ಆತ್ಮಗೆಡಿ
ದೊರೆಗಳಂತೆ ಥಳುಕು.
ಆಸೆ ಕಾಮ ಕ್ರೋಧವೆಂಬುದೆ
ಈ ಜಗದ ಸರಕು,
ಎಲ್ಲ ಮೀರಿ ಬೆಳೆಯಬಲ್ಲೆವೆ ನಾವು?
ಎಂಬ ಅಳುಕು.
ಸದಾ, ನಾನು ನನ್ನದೆಂಬ ಭಾವಗಳ ಸೆಳೆತ
ಮೋಹವೆಂಬ ಪಾಶವಿದುವೆ ,
ಕತ್ತಿಯಲಗಿಗಿಂತ ಹರಿತ.
ಇದರಿಂದಲೇ ಲೋಕವಾಯ್ತೆ ಸದಾ ದುಖ:ಭರಿತ?
ಕೆಳ್ವರಾರು ಲೋಕದಲ್ಲಿ ನನ್ನೊಳಗಿನ ಮೊರೆತ.
ಮುನಿಸು
(ಕೃಷ್ಣ ರಾಧೆಯನ್ನು ಬಹುದಿನಗಳ ನಂತರ ಸಂಧಿಸಿದಾಗ, ಆಕೆ ಕೋಪಿಸಿಕೊಂಡು, ತೋರುವ ಹುಸಿಮುನಿಸು, ಮತ್ತು ಆತನ ಸಾನ್ನಿಧ್ಯದಲ್ಲಿ ಮತ್ತೆ ಶರಣಾಗುವ ಪರಿ)….
ಕರೆದರೂ ಬರುತ್ತಿಲ್ಲ
ನೀನನ್ನ ಸಖನಲ್ಲ
ಹೋಗು ಹೊಗೆನ್ನ ತೊರೆದು.
ಬಣ್ಣದಾ ಮಾತೆಲ್ಲ
ಹುಸಿ ಪ್ರೇಮ ಬೇಕಿಲ್ಲ
ಕುಳಿತಿರು ನೀ ದೂರಸರಿದು.
ಪ್ರೀತಿಯ ಮಾತಿಲ್ಲ
ಪ್ರೇಮದಾ ಶೃತಿಯಿಲ್ಲ
ಮನವಾ ಯ್ತು ಇಂದೇಕೋ ಬರಿದು.
ನಕ್ಕರೂ ನಗುತಿಲ್ಲ
ಅಕ್ಕರೆಯು ಇನಿತಿಲ್ಲ
ನೀನಲ್ಲ ನನ್ನ ಹರಿಯು.
ನೀನಿರುವೆ ಮನದಲ್ಲಿ
ನನ್ನಾತ್ಮ ಪ್ರಾಣದಲಿ
ನೀನೇನೆ ಈ ಜೀವ ಗತಿಯು.
ಹುಸಿಮುನಿಸ ನಂಬದಿರು
ತೊರೆದೆನ್ನ ಪೋಗದಿರು
ನಾನಲ್ಲ ನಿನ್ನ ಅರಿಯು.
ಕಂಪನ
ಹೊರಗೆ ತಂಗಾಳಿ
ಒಳಗೆ ಬಿರುಗಾಳಿ
ಈ ಮನವನೆಲ್ಲಿ ಕಟ್ಟಿಡಲೇ ನಾನು?
ಹೃದಯ ಆಸೆಯ ಕೂಪ
ಭುವಿಯು ಬೆಂದಿಹ ತಾಪ
ಶೃಂಗಾರ ಸಿಹಿಗನಸ ಬಚ್ಚಿ ಇಡಲೇನು?
ನಭದಿ ನಗುವ ಪೂರ್ಣ
ಇದಿರು ನೀಲವರ್ಣ
ಧುಮ್ಮಿಕ್ಕುವಾಸೆಯಾ ಹೊಸಕಿ ಹಾಕಲೇನು?
ಸದಾ ಅವನ ಧ್ಯಾನ
ನೀನೆ ನನ್ನ ಪ್ರಾಣ
ತುಟಿ ಬಿರಿದು ನಗುವೊಂದ ಸೂಸಲಾರೆಯೇನು?
ಬರಿದು ಬರಿದೆ ಮುನಿಸು
ಅದೇ ತುಂಟ ಮನಸು
ನನ್ನೊಮ್ಮೆ ಬರಸೆಳೆದು ತಬ್ಬಿಹಿಡಿಯಬಾರದೇನು?
ನಿತ್ಯ ಹಾಸ ವದನ
ಇವನೇ ನನ್ನ ಮದನ
ಬಿಗಿದಪ್ಪಿ ಮುತ್ತಿಕ್ಕಿ ಸಂತೈಸನೆನು?
ಹಾಳೂರಿನ ದಿಬ್ಬಗಳು
ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ$$ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ “ಟಾರ್ಚ್” ಬೇಕು.
ಏನೋ ಮೆರವಣಿಗೆ ಹೊರಟಂತೆ, (ಅ)ಶಿಸ್ತಿನ ಸಿಪಾಯಿಗಳಂತೆ, ಒಬ್ಬರಹಿಂದಿಬ್ಬರು, ಪಕ್ಕಕ್ಕೊಬ್ಬರು, ಆಕಡೆ ಮತ್ತೆ ಮೂವರು. (ಅಬ್ಬಾ ತಲೆ ಲೆಕ್ಕ ತೆಗೆಯಲಾರೆ!!). ಜಾತ್ರೆಗೆ ಹೊರಟರೋ? ಯಾವ ಜಾತ್ರೆ ಇರಬಹುದು? ಉಹುಂ, ಸದ್ಯ ಯಾವುದೇ ಜಾತ್ರೆ ಇರುವಂತೆ ತೋರುತ್ತಿಲ್ಲ ! ಅದು ಜಾತ್ರೆಗಾದರೆ ಈ ಸಂಜೆಯ ಹೊತ್ತಲ್ಲೇಕೆ ಪ್ರಯಾಣ? ಮತ್ತೆ ? ಗುಳೆ ಹೊರಟರಾ? ಗುಳೆ ಹೊರಟರೆ “ಲಗೇಜು” ಇರಬೇಕಲ್ಲವಾ ? ಅದೂ ಕಾಣಿಸ್ತಿಲ್ಲ ! ಅಷ್ಟಕ್ಕೂ ಗುಳೆ ಹೋಗುವಂತದೇನಾಗಿದೆ ಈ ಊರಿಗೆ? “ಹಂದಿ ಜ್ವರ ” ಎನ್ನುವ ಹೆಮ್ಮಾರಿ ಒಂದನ್ನ ಬಿಟ್ಟು ಉಳಿದಿದ್ದೆಲ್ಲ ‘ನಾರ್ಮಲ್’ ಆಗಿಯೇ ಇದೆಯಲ್ಲ ! ನನ್ನಷ್ಟಕ್ಕೆ ನಾನು ಸಮಾಧಾನ ಪಟ್ಟುಕೊಂಡೆ !
ಒಂದಿಬ್ಬರು ನಿಧಾನವಾಗಿ ಸಾಗುತ್ತಿದ್ದರೆ, ನಾಲ್ಕಾರು ಜನ ಪೆಕರು ಪೆಕರಾಗಿ ಹಲ್ಕಿರಿಯುತ್ತಾ ನಡೆಯುತ್ತಿದ್ದಾರೆ. ಇನ್ನೂ ಕೆಲವರು ಏನೋ ಧಾವಂತದಲ್ಲಿ (ಕ್ವಟ್ರೋಚಿಗೆ ಭಾರತ ಬಿಟ್ಟು ಓಡಿ ಹೋಗಲು ಧಾವಂತವಿದ್ದಂತೆ !! (ಹೋಗಲು ಅವನಿಗೆ ಧಾವಂತವಿತ್ತೋ? ಅಥವಾ ಕಳುಹಿಸಲು ನಮ್ಮವರಿಗೆ ತರಾತುರಿ ಇತ್ತೋ ಎನ್ನುವುದು ಇಲ್ಲಿ ಅಪ್ರಸ್ತುತ!!) )ಸಾಗುತ್ತಿದ್ದಾರೆ. ಸುಮಾರು ಹನ್ನೆರಡರ ಪೋರಿಯೋಬ್ಬಳು ಕಾಲಿಗೆ ಚಕ್ರ ಕಟ್ಟಿ ಕೊಂಡು ಓಡುವ ಪ್ರಯತ್ನದಲ್ಲಿದ್ದಾಳೆ. ಹರೆಯದ ಹುಡುಗರ ಕೈ ಪಕ್ಕದಲ್ಲೇ ನಡೆಯುತ್ತಿರುವ ಗೆಳತಿಯ ಕೈಯಲ್ಲಿ ಭದ್ರವಾಗಿ ಕೂತು, ನಾಲ್ಕೂ ಕಾಲುಗಳು ಒಂದೇ ಗತಿಯಲ್ಲ್ಲಿ ಹೆಜ್ಜೆ ಇಡುತ್ತಿವೆ . ಆದರೆ ಅವನ ತುಂಟ ಕಂಗಳು ಮಾತ್ರ ಪಕ್ಕದಲ್ಲಿ ಸಾಗಿ ಹೋಗುತ್ತಿರುವ “ಚಂದ್ರ ಚಕೋರಿ”ಯರಮೇಲೆ ಆಗಾಗ ಹಾಯುತ್ತಿದೆ. “ಹಿರಿತಲೆ”ಗಳು ‘ಉಭಯ ಕುಶಲೋಪರಿ ಸಾಂಪ್ರತ ‘ ಮುಗಿಸಿ, ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾರೆ.
ಇವೆಲ್ಲ ಅಪರೂಪಕ್ಕೆ “ತಂತ್ರಾಂಶ ಕಾರ್ಖಾನೆ “ಯಿಂದ ಬೇಗನೆ ಹೊರಬಂದ ನಮಗೆ ಹೊಸದು. ಆದರೆ ಈ ದಿಬ್ಬಗಳು ದಿನನಿತ್ಯ ಇವನ್ನೆಲ್ಲ ಕಂಡಿವೆ. ಜನರ ಅಲೆದಾಟಗಳನ್ನು ನೋಡಿವೆ . ಹೆಚ್ಚು ತಿಂದವರು (“ಲಂಚ್” ಅಥವಾ “ಲಂಚ”? ಏನನ್ನು ತಿಂದವರು ? ನೀವೇ ನಿರ್ಧರಿಸಿ) ಕರಗಿಸಲೆಂದೂ, ತಿನ್ನದವರು ಪಕ್ಕದ ಮೋರಿಯಿಂದ ಎತ್ತಿ ಕುದಿಸಿ ಮಸಾಲೆ ಹಾಕಿ ‘ಘಂ’ ಎನ್ನುವಂತೆ ಮಡಿದ “ಪಾನಿ ಪೂರಿ” ತಿನ್ನೋಣವೆಂದೂ, ತಿನ್ನಲಾಗದವರು ನೋಡೋಣ ಎಂದೂ (ಏನನ್ನ ನೋಡೋಣ? ಮುಂದಿನ ಪ್ಯಾರದಲ್ಲಿ ಉತ್ತರವಿದೆ. ), ಜೊತೆ(pair) ಇರುವವರು ಸಮಯ ಸದ್ವಿನಿಯೋಗಕ್ಕೆಂದೂ, ಇರದವರು ಅರಸಲೆಂದೂ ತನ್ನೆಡೆಗೆ ಬರುವುದನ್ನು ಈ ದಿಬ್ಬಗಳು ಕಳೆದ ಹಲವಾರು ವರ್ಷಗಳಿಂದ ನೋಡಿವೆ. ಇಂಗ್ಲಿಷರು ಅದನ್ನು “ವಾಕಿಂಗ್” ಎಂದೂ, ಕನ್ನಡದವರು “ಗಾಳಿ ತಿನ್ನುವುದೆಂದೂ” ಹೇಳಿದ್ದನ್ನೂ ಅದು ಎಷ್ಟೋ ಸಾರಿ ಕೇಳಿಸಿಕೊಂಡಿದೆ.
ಅಷ್ಟಲ್ಲದೇ ಈ ದಿಬ್ಬಗಳು ಇಂದು ವಾಯುವಿಹಾರಕ್ಕೆ ಬಂದಿರುವ ಅದೆಷ್ಟೋ “ನೆರೆತ ಕೂದಲಿನ ಯುವಕರು” ‘ ಲವ್ @ ಫಸ್ಟ್ ಸೈಟ್ ‘ ಎಂದು ಹಳ್ಳಕೆ ಬಿದ್ದದ್ದನ್ನು ನೋಡಿ ಪಕ ಪಕನೆ ನಕ್ಕಿದೆ . ಅದೇ ಜನರಿಗೆ ತನ್ನ ಮರೆಯಲ್ಲಿ ಪ್ರಥಮ ಪ್ರೇಮ ಪಾಠವನ್ನೂ ಕಲಿಸಿದೆ. ಅದೇ ಜನರ ಮುಂದಿನ ಪೀಳಿಗೆಯೂ ತನ್ನ ನೆರಳಿನಲ್ಲೇ ಪ್ರೇಮ ಪಾಠ ಕಲಿಯುತ್ತಿರುವ ಸಂತೃಪ್ತಿಯೂ ಈ ದಿಬ್ಬಗಳಿಗಿದೆ.
ಹೆಂಗೆಳೆಯರು ಸೂಸಿದ ಸುಗಂಧ ದ್ರವ್ಯದ ಪರಿಮಳವನ್ನು ಅಸ್ವಾದಿಸಿದೆ. ಮಲ್ಲಿಗೆಯ ಘಮವನ್ನೂ ಅನುಭವಿಸಿದೆ . ಜೋಡಿ ಪಕ್ಷಿಗಳು ಎಲ್ಲಿಂದಲೋ ಹಾರಿ ಬಂದು, ದಿಬ್ಬಗಳ ನೆರಳಿನಲ್ಲಿ ಅವಿತು ಕುಳಿತು , ತಬ್ಬಿ ಹಿಡಿದು ಮುತ್ತಿಟ್ಟಾಗ, ಇವು ನಾಚಿ ಕಣ್ಮುಚ್ಚಿಕೊಂಡಿವೆ. ಪ್ರೇಮಿಗಳ ಪಿಸುಮಾತನ್ನು ಪ್ರತಿನಿತ್ಯ ಕೇಳಿ ಅನುಭವಿಸಿವೆ.ಅದೇ ಪ್ರಣಯ ಪಕ್ಷಿಗಳು ದಿಬ್ಬದ ಮೇಲೆ ಬಿದ್ದು ಹೊರಳಾಡಿದಾಗ, ಅವರ ದೇಹ ಸಿರಿಯನ್ನು “ತಾನೆ ಅನುಭವಿಸಿದಷ್ಟು ” ಸಂತಸಪಟ್ಟಿವೆ. ಕುಡಿದು ತೂರಾಡಿಬಂದು,ಲೋಕವನ್ನೇ ಮರೆತು ಬಿದ್ದುಕೊಂಡಿರುವ ಪುಂಡ ಪಟಿಂಗರಿಗೆ ಅಂಗಿಯೊಳಗೆ ಇರುವೆ ಹರಿಸಿ,ತಕ್ಕ ಶಾಸ್ತಿ ಮಾಡಿವೆ.
ಈ ರೀತಿಯ ದಿನಚರಿಯೇನೂ ಈ ದಿಬ್ಬಗಳಿಗೆ ತೀರಾ ಹೊಸತಲ್ಲ, ಅಥವಾ ತುಂಬಾ ಹಳತೂ ಅಲ್ಲ . ಆದರೆ ಕಳೆದ ಕೆಲವು ವರ್ಷಗಳಿಂದ ತನ್ನಕಡೆಗೆ ಸಾಗಿ ಬರುತ್ತಿರುವ ಜನ ಪ್ರವಾಹ ಊರ್ಧ್ವಗತಿಯಲ್ಲಿರುವುದು ಮಾತ್ರ ಈ ದಿಬ್ಬಗಳ ಅರಿವಿಗೆ ಬಂದಿದೆ. ೨ ವರ್ಷ ಎಳೆಯ ‘ಪಾಪು’ಗಳು ಅಮ್ಮನ ಮಡಿಲಿನಲ್ಲಿ ಕೂತು , ತನ್ನಡೆಗೆ ನೋಡಿ ನಕ್ಕು ನಲಿದಾಡುವುದು, ತನ್ನಮೇಲೆ ತಮ್ಮ ಪುಟ್ಟ ಪಾದಗಳನ್ನೂರಿ ಕುಣಿದು ಕುಪ್ಪಳಿಸುವುದು, ಆನಂದಿಸುವುದು ಇನ್ನೂ ಹಸಿ ಹಸಿಯಾಗಿಯೇ ಇದೆ. ಅದೇ ಕಂದಮ್ಮಗಳು ಕೇವಲ ಮತ್ತೆರಡು ವರ್ಷಗಳ ಅಂತರದಲ್ಲಿ, ಅನಿವಾರ್ಯ ಕರ್ಮವೋ ಎಂಬಂತೆ ‘ಗಲಿ ಸೇವನೆಗೆ ‘ ಬರುವುದನ್ನೂ , “ಅಸ್ತಮಾ” ಎನ್ನುವ ಪಿಶಾಚಿಯನ್ನು ಹೊತ್ತು ತಿರುಗುವುದನ್ನೂ ನೋಡಿ, ತನ್ನಲ್ಲೇ ತಾನು ಈ ಹಾಳೂರಿನ ನಗರಗಳಿಗೆ, ವಿಷ ಸೂಸುವ ಕಾರ್ಖಾನೆಗಳಿಗೆ ತನ್ನಲ್ಲೇ ತಾನು ಶಾಪ ಹಾಕಿದೆ.
ಇಷ್ಟೆಲ್ಲಾ ಸಿಹಿ/ಕಹಿ ಸತ್ಯಗಳನ್ನು ತನ್ನಲ್ಲೇ ಅರಗಿಸಿಕೊಂಡ ಈ ದಿಬ್ಬಗಳು ಇಂದು ಮಾತ್ರ ತಮ್ಮ ಚೈತನ್ಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶೋಕ ಸಾಗರದಲ್ಲಿ ಮುಳುಗಿದಂತೆ ತೋರುತ್ತಿದೆ. ನಾಲ್ಕಾರು ವರ್ಷದ ಎಳೆಯ ಕಂದಮ್ಮಗಳು ಇಂದು ಅದರ ಮಡಿಲಿನಲ್ಲಿ ಮಲಗಿವೆ. ಹಸಿವು, ಬಾಯಾರಿಕೆ ಸಂಕಟಗಳಿಂದ ಒದ್ದಾಡುತ್ತಿವೆ. ಎಲ್ಲಿಂದ ಬಂದ ಮಕ್ಕಳಿವು?. ಅವಕ್ಕೂ ಗೊತ್ತಿಲ್ಲ, ತನಗೋ ತಿಳಿದಿಲ್ಲ. ಎಲ್ಲಿನದ ಬಂದಿರೆಂದು ಕೇಳಲು ಧ್ವನಿಯೂ ಬರುತ್ತಿಲ್ಲ.
ಇತ್ತ ವಾಯುವಿಹಾರಕ್ಕೆ ಬಂದವರಾದರೂ ಇದನ್ನು ಗಮನಿಸಿ ಸಹಾಯ ಮಾಡಬಾರದೆ? ನನಗೂ ಎಲ್ಲಾ ಅರ್ಥವಾಗುತ್ತಿದೆ ,ಆದರೆ ಕೂಗಿ ಹೇಳಲು ಧ್ವನಿ ಬರುತ್ತಿಲ್ಲ ಎಂದು ಆ ದಿಬ್ಬಗಳು ಮರುಗುತ್ತಿವೆ. “ವ್ಯಕ್ತಪಡಿಸಲಾರದ ಭಾವನೆಗಳು ಇದ್ದರೆಷ್ಟು ಸತ್ತರೆಷ್ಟು ?” ಎಂದು ತನ್ನನೇ ತಾನು ಹಳಿದು ಕೊಳ್ಳುತ್ತಿವೆ.
ಜಗತ್ತಿನ್ನ ಎಲ್ಲಾ ವೈಭೋಗಗಳನ್ನು ಕಂಡು ಅನುಭವಿಸಿದ ದಿಬ್ಬಗಳು, ಇಂದು ಅನ್ಯಮನಸ್ಕವಾಗಿವೆ. “ಗಾಲಿ”ಗಳೂ, “ಧಣಿ”ಗಳೂ, “ಸ್ವಾಭಿಮಾನಿಗಳೂ”, ತಮ್ಮನ್ನು ಹಾಗೆ ಬಿಟ್ಟರೆ, ಮುಂದಿನ ತಲೆಮಾರಿಗೂ ಆಶ್ರಯ ನೀಡುವ ಸಂಕಲ್ಪ ಮಾಡಿ ಕುಳಿತಿವೆ. ಬಹುಬಲಿಯಂತೆ ನಗ್ನರಾಗಿ, ಕಣ್ಮುಚ್ಚಿ ತಪೋನಿರತರಾಗಿ ಕುಳಿತಿವೆ. ಸುಮಾರು ವರ್ಷಗಳಿಂದ ಅಲ್ಲೇ ಕುಳಿತಲ್ಲೇ ಇವೆ. ಕುಳಿತೆ ಇರುತ್ತವೆ !! .
ನಿನಗಾಗಿ
ಕಾದಿಹನು ಸುಂದರ
ನಾಚಿಹನು ಚಂದಿರ
ಚಲುವೆ ಎಲ್ಲಾ ನಿನಗಾಗಿ
ಅರಳಿದೆ ಸುಮವು
ಸೂಸಿದೆ ಘಮವು
ಚಲುವೆ ಎಲ್ಲಾ ನಿನಗಾಗಿ
ಇಣುಕಿದನು ಅರುಣ
ಅಳುತಿಹನು ವರುಣ
ಚಲುವೆ ಎಲ್ಲಾ ನಿನಗಾಗಿ
ನಗಬಾರದೇ ನೀನೊಮ್ಮೆ ಇತ್ತ ನೋಡಿ?
ನಗಿಸಲಾರೆಯ ಒಮ್ಮೆ ಮಾತನಾಡಿ?
ಕಾಡುತಿದೆ ಕೆಂಪುತೋಟದ ನೆನಪು
ನಿನ್ನಾ ವಯ್ಯಾರ ಒನಪು!
ಭೋರ್ಗರೆಯುತ್ತಿದೆ ಇಂದೆನ್ನ ಹೃದಯ ತುಂಬಿ,
ನಾನಾಗಬಾರದೆ ಕೆಂದುಟಿಯ ಮಕರಂದ ಹೀರುವಾ ದುಂಬಿ.
ಒಂಟಿತನ
ಭಾವ ನಿರ್ಜೀವ
ಒಂಟಿ ಈ ಜೀವ
ಬರಿದೆ ಬತ್ತಲಾಯ್ತು ಮನಸು
ನುಚ್ಚು ನೂರಾದ ಕನಸು?
ಹಗಲು ಭೀಕರ
ಇರುಳು ದುರ್ಭರ
ದಿನವು ಭಾವನೆಗಳಬ್ಬರ
ಉರಿವುದುದರ
ಅದರುವುದಧರ
ಹೃದಯ ಯಾತನ ಸಾಗರ.
ಬಿಸಿಯುಸಿರು..
ಜೊತೆ,
ಧುಮ್ಮಿಕ್ಕುವಾ ಅಶ್ರುಧಾರೆ,
ಇದೆಲ್ಲದರಾ ನಂತರ.
ನನಗೆ ನೀನು
ನಿನಗೆ ನಾನು
ಎಂಬ ನವಿರಾದ ಭಾವ,
ಅಗಲುವಾಗ ತರಬಹುದೇ
ಇನ್ನಿಲ್ಲದಂತಹ ನೋವ?
ನಿನಗೆ ನೀನೆ ಎಂಬ ಸತ್ಯಕೆ
ದೊರಕಿಹುದಿಂದು ಮರುಜೀವ !!
ಹಂಬಲ
ಸುರಿದಿದೆ ಕಣ್ಣಿರು
ಆಸೆಗೆ ತಣ್ಣೀರು
ಮತ್ತೆ ಬರಿದಾದ ಮನಸು
ನಿನಗೇಕಿನ್ನೂ ಮುನಿಸು?
ಬದುಕು ಬೀದಿಯಲ್ಲಿ
ನೀರು ನೆರಳು ಎಲ್ಲಿ?
ಎಲ್ಲಿ ಹೋದರಲ್ಲಿ
ಉಳಿವುದೊಂದೆ ಭಾವ
ನೀನೆ ನನ್ನ ಜೀವ!!
ಮತ್ತೆ ಕಣ್ಣಾ ಮುಚ್ಚಾಲೆ
ತಿರು ತಿರುಗೊ ಉಯ್ಯಾಲೆ
ಬಿಡಿ ಬಿಡಿಯಾದ ತುಣುಕು
ಜೋಡಿಸಿದರೆ ಕೆಡುಕು
ಬಿಟ್ಟರೆ ಒಡಕು !!
ಈ ಜೀವನ ನೀನಾಯ್ದ ಭಾಗ
ಹಾಕಬೇಕಿನ್ನೆಷ್ಟು ಲಾಗ?
ಕೊಡಲಾರೆಯಾ..
ನಿನ್ನಾಸರೆಯಲ್ಲೊಂದಿಷ್ಟು ಜಾಗ?
ಪರಿಶುದ್ಧನಾಗಿಸೆನ್ನ ಬೇಗ!!
ನಿನ್ನ ನೆನಪಲ್ಲಿ
ಅಳಿದುಳಿದ ಭಾವಗಳ
ಮನದಲ್ಲಿ ಹೊತ್ತು,
ಈ ಮುಸ್ಸಂಜೆ ಹೊತ್ತು.
ಅಂತ್ಯದಲುಳಿದ ಕನಸುಗಳಿಗಾಗಿ
ಜೀವನವನೆ ತೆತ್ತು!!
ಭಾವಗಳ ಭರದಲ್ಲಿ,
ಪ್ರೇಮದಬ್ಬರದಲ್ಲಿ,
ಸೂಸುವಾ ಕಂಪಿನಲಿ,
ಬೀಸುವ ಗಾಳಿಯಲಿ,
ಎಲ್ಲೆಲಿ ಹೋದರಲ್ಲಿ,
ಕಾಡುವುದೊಂದೇ ಕನಸು
ನೀ ನನ್ನ ಹೃದಯ
ಎನ್ನುತಿದೆ ನನ್ನ ಮನಸು!!
ಸೂರ್ಯನುದಿಸುವ ಮೊದಲೇ
ಹೊಂಗಿರಣ ಸೂಸುವುದೇಕೆ?
ಶಶಿಯು ನಗುವಾ ವೇಳೆ
ತಂಗಾಳಿ ಬೀಸುವುದೇಕೆ?
ನಿನ್ನಿರುವ ತಿಳಿಸಲು
ಬೇರೆ ಸುಳಿವಿನ್ನೂ ಬೇಕೇ?
ಸುಡುಬಿಸಿಲ ಝಳದಲ್ಲೂ
ತಂಪಾದ ಭಾವ
ನಡುರಾತ್ರಿ ಚಳಿಯಲ್ಲೂ
ಬೆವೆತಿರುವ ದೇಹ
ನಸುಗಪ್ಪು ಮುಂಜಾನೆ
ರವಿಬೆಳಗೋ ಸಮಯ
ನುಸು ನಗಲು ನೀನೊಮ್ಮೆ,
ದಿನ ಆನಂದಮಯ.
ಉಳಿದ ಭಾವಗಳನು ಮೀಟಿ
ಸಂಜೆಯನು ದಾಟಿ
ಹಿಂದಿರುಗಿ ನೋಡಲೊಮ್ಮೆ
ಕಂಡಿದ್ದು ಕಡಿದಾದ ದಾರಿ,
ಮಿಡಿಯಿತೆನ್ನ ಜೀವ
ಭಾವದೆಲ್ಲೆಗಳನೂ ಮೀರಿ!!
ಮತ್ತೆ,
ಮತ್ತೆ,
ನಿನ್ನ ನೆನಪಾಗಿ,
ನಾ ಅತ್ತೆ ..!!
ಗೆಳತಿ,
‘ಕ್ಲಾಸ್ ರೂಂ’ ನ ಕೊನೆಯ ಸಾಲಿನಲ್ಲಿ ಕುಳಿತಿದ್ದವನೆಡೆ ನೀ ಬೀರಿದ ನುಸುನಗೆ ……..
ಚಲುವೆಯ ನಗುವೊಂದೇ ಅಲ್ಲವೇ ಹುಡುಗರ ಹೃದಯ ಕುಲುಕುವುದು?
ನಗುವಿಂದ ಶುರುವಾದ ಪರಿಚಯ ಸ್ನೇಹವಾಗಲು ಬೇಕಾಗಿದ್ದು ಸರಿ ಸುಮಾರು ೪ ತಿಂಗಳು
‘campus’ ನಲ್ಲಿ ಪಕ್ಕದಲ್ಲಿ ನಡೆವಾಗ, ನೀನೆ ಅಲ್ಲವೇ ಕೈ ಹಿಡಿದು ಎಳೆದವಳು? ಕೋಮಲೆಯೋರ್ವಳ ಪ್ರಥಮ ಸ್ಪರ್ಶ, ಮೈಯಲ್ಲಿ ಹರಿದಿದ್ದು ವಿದ್ಯುತ್?..
ಹುಡುಗಿಯಂದರೆ, ಮುದುರಿ ದೂರ ಸರಿಯುತ್ತಿದ್ದವನ ಕಣ್ಣಲ್ಲಿ ಕಣ್ಣಿಟ್ಟು, ಪ್ರೀತಿಯಿಂದ ಕರೆದು, ಬಿಗಿದಪ್ಪಿದವಳು ನೀನು…
ಬೆಳೆದಿದ್ದು ಸುಮಧುರ ಭಾಂಧವ್ಯ, ಪಡೆದಿದ್ದು ಅಮೃತದಂತಃ ಪ್ರೀತಿ. ಪ್ರಿತಿಯಲ್ಲೇ ಸುಖವಿರುವುದು? ಹೌದು, ನಾನು ಬುದ್ದನಾದೆ ..!!
ಸಮುದ್ರ ಅಲೆಗಳ ಜೊತೆ ತೇಲಿ ಬಂದ ನಿನ್ನ ಕಿಲಕಿಲ ನಗುವಿನ ಮೊರೆತ, ಶರಾವತಿಯ ಅಂಚಿನಲ್ಲಿ ನಿನ್ನ ಹಿತವಾದ ಮಾತುಗಳ, ಭಾವಗಳ ಮಿಡಿತ ಎಲ್ಲವು ಮತ್ತೆ ಮತ್ತೆ ಜ್ಹೆಂಕರಿಸುತ್ತಿವೆ.
ತಂಗಾಳಿಯಲ್ಲಿ, ಇಳಿ ಸಂಜೆಯ ಮಬ್ಬು ಕತ್ತಲಿನಲ್ಲಿ ನೀ ನೀಡಿದ ಸಿಹಿಮುತ್ತಿನ ಸವಿ ಇನ್ನೂ ಹಾಗೆ ಇದೆ. ಭವಿಷ್ಯದ ಕನಸುಗಳನ್ನು ನೀನು ಎಳೆ ಎಳೆಯಾಗಿ ಬಿಚ್ಚಿಟ್ಟ ಪಿಸು ಮಾತಿನ ಕಲರವ ಇನ್ನೂ ಅನುರಣಿಸುತ್ತಿದೆ.
ಸಖಿ,
ನಿನ್ನ ನೆನಪುಗಳ ಜೇ೦ಗೊಡ ಇಂದು ಭಾವಗಳ ಅಲೆಯಲ್ಲಿ ತುಂಬಿ ಓಲಾಡುತ್ತಿದೆ . ನಿನ್ನ ಜೊತೆಗಿನ ಸವಿ ಕ್ಷಣಗಳ ನೆನಹು ಮನವನ್ನಾವರಿಸಿದೆ. ಪ್ರೇಮ ಸಲ್ಲಾಪಕ್ಕಾಗಿ ಮನ ಕಾತರಿಸುತ್ತಿದೆ. ಮತ್ತೆ ಮತ್ತೆ ಅದೇ ಸವಿಮಾತು ‘I LOVE YOU ‘ ಕೇಳಬೇಕೆನಿಸುತ್ತಿದೆ.
ನಿನ್ನ ಜೊತೆಯಾಗುವ ಸಮಯದ ನೀರೀಕ್ಷೆಯಲ್ಲಿ,
ನಿನ್ನ ಪ್ರೀತಿಯ ಹುಡುಗ