RSS

Monthly Archives: ಏಪ್ರಿಲ್ 2012

ನಿನ್ನೊಡನೆ ಪ್ರತಿದಿನ

ಇಳಿಸಂಜೆ ಹೊತ್ತಲ್ಲಿ
ಸಾಗರದ ಅಂಚಿನಲಿ,
ನೀನೇಕೆ ಕೈಬೀಸಿ ಕರೆದೆ?
 
ಶಶಿ ಬೆಳಗೋ ಸಮಯದಲಿ
ತಂಗಾಳಿ ಅಲೆಯಲ್ಲಿ ,
ಪ್ರೇಮದಾ ಮಳೆಯಾಗಿ ಸುರಿದೆ.

ನಡುರಾತ್ರಿ ಚಳಿಯಲ್ಲಿ
ಕಗ್ಗತ್ತಲೊಡಲಲ್ಲಿ,
ನೀನೇಕೆ ದೂರಾಗಿ ಉಳಿದೆ?.

ಮುಂಜಾನೆ ಮಂಜಿನಲಿ
ರವಿ ಮೂಡೊ ವೇಳೆಯಲಿ,
ಮತ್ತೇಕೆ ಮೌನವನು ಮುರಿದೆ?.

ಉದಯದಾ ಸ್ಪರ್ಶದಲಿ
ಹೊಂಬಣ್ಣ ಕಿರಣದಲಿ,
ಮತ್ತದೇ ಕನಸಾಗಿ ಉಳಿದೆ!!

Advertisements
 

ಹೀಗೊಂದು ಹರಿಕಥೆ

ಅದೊಂದು ಭಾನುವಾರ ಮಧ್ಯಾಹ್ನ. ಭಾರತ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯ. ನಮ್ಮವರು ಸೋಲುವರೆಂಬ ಖಾತ್ರಿ ಇದ್ದರೂ, ಪಂದ್ಯ ನೋಡಲು  ಅದೇನೋ ಉತ್ಸಾಹ. ಕ್ರೀಡಾ ಸ್ಪೂರ್ತಿ ಎಂದರೆ ತಪ್ಪಾದೀತು. ಏಕೆಂದರೆ, ನಮ್ಮ ತಂಡ ಚೆನ್ನಾಗಿ ಆಡದಿದ್ದರೂ, ಎದುರಾಳಿ ಪಾಳಯವೇ ಏನಾದರೂ ತಪ್ಪೆಸಗಿ, ಸೋಲಲಿ ಎಂಬ (ಅತಿ?)ಆಸೆ. ನಮ್ಮ ಕಪಿ ಸೈನ್ಯ “ಮೂರ್ಖರ ಪೆಟ್ಟಿಗೆ “ಯ ಮುಂದೆ ಕುಳಿತು “ಸಮಯ ಕೊಲ್ಲುವುದರಲ್ಲಿ ” ನಿರತವಾಗಿತ್ತು. ಸೈನ್ಯದ “ನಾಯಕ ವಾನರ” ಇಲ್ಲದಿದ್ದುರಿಂದಲೋ ಏನೋ, ಸದ್ದು ಗದ್ದಲವಿಲ್ಲದೆ ಕುಳಿತಿದ್ದ ಗುಂಪಿನಲ್ಲಿ ಅದಾಗಲೇ ಇಬ್ಬರು ನಿದ್ರಾ ದೇವಿಗೆ ಶರಣಾಗಿದ್ದರು.

ಇದ್ದಕ್ಕಿದ್ದಂತೆ ಕಾಲಿಂಗ್ ಬೆಲ್ “ಡಿಂಗ್ ಡಾಂಗ್”  ಸದ್ದು ಮಾಡಿತು. ಹೋಗಿ ಬಾಗಿಲು ತೆರೆದರೆ, ಕಾಣೆಯಾಗಿದ್ದ ಕಪಿಸೈನ್ಯದ ನಾಯಕ “ಕೆಂಪ” ಪ್ರತ್ಯಕ್ಷನಾಗಿದ್ದ. ಸದಾ ನಗುಭರಿತ ಮುಖದಲ್ಲಿ ಇಂದೇಕೋ ಏನೋ ದುಗುಡ. ” ಏನಾಯ್ತೋ ಕೆಂಪ?. ಹೊಸ ಹುಡುಗೀನೂ ಕೈಕೊಟ್ಲಾ?”, ಪ್ರಶ್ನೆಯ ಬಾಣ ನನಗರಿವಿಲ್ಲದೆಯೇ ಆತನನ್ನು ಕೆಣಕಿತ್ತು. “ಸದಾಶಿವನಿಗೆ ಅದೇ ಧ್ಯಾನ ” ಅದೇನೋ ಅಂತಾರಲ್ಲ ಹಂಗಾಯ್ತು ನಿನ್ನ ಕತೆ. ನಮ್ಮ ಕಷ್ಟ ನಮಗೆ ಎಂಬ ಉದಾಸೀನ ಭಾವದ ಕ್ಷೀಣ ಸ್ವರವೊಂದು ಕೆಂಪನಿಂದ ಹೊರಟಿತು. ಸುಮ್ಮನಿರೋ, ಪಾಪ ಏನೋ ಆಗಿರಬೇಕು, ಏನಾಯ್ತು ಕೇಳೋಣ, ಎಂದು ನಮ್ಮ ಸಂಪೂರ್ಣ ಸೈನ್ಯ ಆತನ ಬೆಂಬಲಕ್ಕೆ ನಿಂತಿತು.

ಅಂಥದ್ದೇನೂ ಇಲ್ಲ ಕಣ್ರೋ, ಆದ್ರೆ  ನಾಳೆಯಿಂದ ನಾನು ಮಾತ್ರ ಆ “ಜಿಮ್”ಗೆ ಹೋಗೋದಿಲ್ಲ ಎಂದುಲಿದ ಕೆಂಪ. ಅಂಥದ್ದೆನಾಯ್ತೋ? “ಯಾಕ  ಹೀಂಗ ಅದ್ಲಿಕ್ ಹತ್ತಿ?. ತಲಿ ಸಮ ಇಲ್ಲೇನು?. ದುಡ್ಡ ಹೆಚ್ಚಾತೆನಲೇ ಮಗ್ನ ನಿಂಗ?. ಇಲ್ಲಾಂದ್ರೆ ಹನ್ನೊಂದು ಸಾವ್ರ ಕೊಟ್ಟು  ಮೊನ್ನಿ ಮೊನ್ನಿ ‘ಜಿಮ್’ ಸೇರಿದಿ. ಇವತ್ ಬಿಡಾಕ್ ಹತ್ತಿ. ನೀ ಕೆಲ್ಸಾ ಮಾಡೋ ಕಂಪನಿ ಏನರ ನಿಂಗ್ ರೊಕ್ಕ ಪುಕ್ಶಟಿ  ಕೊಡ್ತೈತೇನು? ಕಟ್ಟಿ ದುಡ್ಯುಹಾಂಗ ದುಡಿಸ್ತಾರು, ಬಿಕ್ಷೆ ಕೊಟ್ಟಂಗ್ ಕಾಸ್ ಕೊಡ್ತಾರು. ಇಲ್ ನೋಡಿದ್ರ ನೀ ಮಂಗ್ಯಾ  ನನ್ ಮಗ ಅಡಿದಂಗ ಆಡಾಕ್ ಹತ್ತಿ. ೧೧ ಸಾವ್ರ ಅಂದ್ರೆ ಏನು ಕಡಮಿ ಅಂತೆ ತಿಲ್ದಿದ್ಯೇನೋ?” ಪಕ್ಕ ಉತ್ತರ ಕರ್ನಾಟಕ ಭಾಷೆಯಲ್ಲಿ ಕೆಂಪನನ್ನು ದಬಾಯಿಸಿದ ಸಂತ್ಯಾ.

ಏನಾಯ್ತು ನೀ ಹೇಳೋ ಮೊದ್ಲು. ಉಳ್ಡಿದೆಲ್ಲ ಆಮೇಲೆ ಎಂದು ನಾನು ಕೆಂಪನನ್ನು ವಿಚಾರಿಸುತ್ತಿದ್ದಂತೆ, ಕೆಂಪನ ಕಥಾ ಪ್ರವಾಹ ಶುರುಗೊಂಡಿತು.

” ಹಿಂದಿನ ವಾರ ನಾನು ಹೊಸದಾಗಿ ‘ಜಿಮ್’ ಸೇರಿದೆ ತಾನೇ? ಅಲ್ಲಿ ನಾನು ಮಾತ್ರ ಹೊಸಬ. ಉಳಿದವರೆಲ್ಲ ಈಗಾಗಲೇ ಆರೆಂಟು ತಿಂಗಳು ಬೆವರು ಹರಿಸಿ, ಚೆನ್ನಾಗಿ ಬೆಳ್ದಿದಾರೆ. ಇಷ್ಟು ದಿನ ನೀವು ನನ್ನ ಹೊಟ್ಟೆ ಮೇಲೆ ‘ಕಾಮೆಂಟ್’ ಹೊಡೆದು ‘ಜಿಮ್’ ಸೇರೋ ಹಾಗಿ ಮಾಡಿದ್ರಿ. ಇಗ ಅವರೆಲ್ಲ ಸೇರಿ ಮತ್ತೆ ನನ್ನ ರೆಗಿಸ್ತಾರೆ ” ಎಂದುಲಿದ ಕೆಂಪ.

‘ಸ್ವಾತಿ’ ಹೋಗ್ತಾಳಲ್ಲ ಅದೇ ಜಿಮ್ ತಾನೇ ನೀನೂ ಸೇರಿರೋದು? ಎಂದು ನಾನು ಕೇಳಿದೆ.
ಅವಮಾನದಿಂದ ಕೆಂಪಾದ ತನ್ನ ಮುಖಾರವಿಂದವನ್ನು ,ಹೌದೆಂಬಂತೆ ಅಲ್ಲಾಡಿಸಿದ ಕೆಂಪ.

“ಓಹೋ ಇದ ಸಮಾಚಾರ? ಆಕೆ ಒಮ್ಮೆ ಕಿಸಕ್ ಅಂತ ನಕ್ಕಿದ್ದಕ್ಕೆ  ಇಷ್ಟೊಂದ್ “ಫೀಲ್” ಆಗಾಕ್ ಹತ್ತಿಯಲ್ಲೋ. ನಾವ್ ಎಷ್ಟ್ ಹೇಳಿದರೂ ತಲೆ ಕೆಡಿಸಿಕೊಳ್ಳದೆ ಕುಳ್ತಿದ್ದೆ, ಗುಂಡು ಕಲ್ಲಿನ ಥರ” ಎಂದು ಉರಿವ ಬೆಂಕಿಗೆ ತುಪ್ಪ ಸುರಿದ ಆನಂದು.

“ನೋಡ್ರಪ್ಪ ಹೊಟ್ಟೆ ಎನ್ನುವುದು ಗೌರವದ ಸಂಕೇತ. ದೊಡ್ಡಸ್ತಿಕೆಯ ಸಂಕೇತ. ಅಲ್ಪ ಸ್ವಲ್ಪ ಹೊಟ್ಟೆ ಇದ್ದು , ಬಿಳಿ ಬಟ್ಟೆ ಹಾಕ್ಕೊಂಡು ಓಡಾಡಿದ್ರೆ, ಜನ “ರಾಜಕಾರಣಿ” ಅಂತ ಗುರ್ತಿಸ್ತಾರೆ. ಗೌರವ ಜಾಸ್ತಿ. ಅಲ್ದೆ  ಪೋಲಿಸ್ ಕೆಲಸಕ್ ಏನಾದರೂ ಸೇರ್ಕೊಂಡ್ರೆ ಹೊಟ್ಟೆ ಇಲ್ದಿದ್ದ್ರೆ ಒದ್ದು ಹೊರಗಡೆ ಹಾಕ್ತಾರೆ ಅಂತ ಕಾಣ್ಸುತ್ತೆ. ದೊಡ್ಡ ಹೊಟ್ಟೆ, ಉದ್ದ ಮೀಸೆ ಇರೋ ಪೋಲಿಸ್ ಆದ್ರೆ, ಬಿಟ್ಟಿ ಸೆಲ್ಯೂಟ್ , ಜೊತೆ ಫ್ರೀ ಆಗಿ ಟೀ, ಕಾಫಿ ಎಲ್ಲ ಸಿಗುತ್ತೆ. ಪೋಲಿಸ್ ಆಗಿ ನರಪೇತಲನಥರ ಇದ್ರೆ “ಲಂಚ” ಹೋಗ್ಲಿ  “ಫ್ರೀ ಲಂಚ್” ಕೂಡ ಸಿಗಲ್ಲ ಗೊತ್ತೇನು?. ನೀ ಪೋಲಿಸ್ ಆಗ್ಲಿಕ್ ಲಾಯಕ್ ಇದ್ದಿ ಕೆಂಪಾ ಬಿಡು” ಎಂದು ಅವನ ಬೆಂಗಾವಲಿಗೆ ನಿಂತ ಹರಿ.

“ಅಷ್ಟೂ  ಅಲ್ದೆ ಹೊಟ್ಟೆ ಮಹತ್ವಾನ ನೀ ಏನೂಂತ ತಿಳ್ಡಿದಿ? ಈಗಿನ ಕಾಲ ಬಿಟ್ಟು, ಪುರಾಣ, ರಾಮಾಯಣ , ಮಹಾಭಾರತದ ಕಲ ನೋಡಿದರೂ ಹೊಟ್ಟೆ ಎಷ್ಟು ಮುಖ್ಯ ಪಾತ್ರ ವಹಿಸಿತೂ ಅಂತ ಗೊತ್ತಾಗುತ್ತೆ. ಮಹಭಾರತದಲ್ಲಿ ಬಲಶಾಲಿ ಅಂದ್ರೆ ಯಾರಪ್ಪಾ?  ಭೀಮ ತಾನೇ? ಅವನಿಗೇನು ಕಡಮೆ ಹೊಟ್ಟೆ ಇತ್ತ? ಒಂದೆತ್ತಿನಗಾಡಿ ಪೂರ್ಣ ಆಹಾರ ಒಬ್ಬನೇ ತಿನ್ದವ್ನಲ್ಲವ ಅವನು? ಶಕ್ತಿ ಸಾಮರ್ಥ್ಯದ ಪ್ರತೀಕ ಈ ಹೊಟ್ಟೆ!!”

“ಪುರಾಣ ಎಲ್ಲ ಮರೆತು ನಮ್ಮ ಕಲಿಯುಗಕ್ಕೆ ಬಂದರೂ,ಹೊಟ್ಟೆ ಯಾ ಮಹತ್ವ ಮಾತ್ರ ಕಡಿಮೆ ಆಗಿಲ್ಲ. ನಮ್ಮ “ಸ್ಯಾಂಡಲ್ ವುಡ್” ಹೀರೋಗಳನ್ನ ನೋಡು, ಎಷ್ಟು ದೊಡ್ಡ ಹೊಟ್ಟೆ ಇಟ್ಟಿರ್ತಾರೆ. ಆದರೆ ಒಂದೇ ಏಟಿಗೆ ೪-೪ ಜನರನ್ನ ಹೊಡೆದು ಉರುಳಿಸ್ತಾರೆ. (ರೀಲೋ ರಿಯಲ್ಲೋ ಎನ್ನುವುದು ಮುಖ್ಯ ಅಲ್ಲ!!) ತುಂಬಾ ದೊಡ್ಡ ಅಲ್ಲ ಅಂದ್ರೂ, ಸ್ವಲ್ಪವಾದರೂ ಹೊಟ್ಟೆ ಇರಬೇಕು. ಅದು ಗಂಡಸರ ಜಾತಿಯ ಒಂದು “ಐಡೆಂಟಿಟಿ ” ಇದ್ದ ಹಾಗೆ ತಿಳಿತಾ?. “ಮೇಲ್”ಗಳ ಹೊಟ್ಟೆಗಿಂತ “ಫಿಮೆಲ್ “ಗಳ ಹೊಟ್ಟೆ ಇನ್ನೂ ಮೇಲು!!. ಅಮ್ಮ ಒಂಬತ್ತು ತಿಂಗಳು ನಿನ್ನನ್ನ ಆ ಗುಡಾಣದಂತ: ಹೊಟ್ಟೆಯಲ್ಲಿ ಇಟ್ಕೊಂಡು ಜೋಪಾನ ಮಾಡದಿದ್ದರೆ ನೀನು ಭೂಮಿ ಮೇಲೆ  ಇವತ್ತು ಇರ್ತಿರ್ಲಿಲ್ಲ !!. ಅದಕ್ಕೆ ಇರಬೇಕು ದಾಸರಂತ ದಾಸರೇ “ಎಲ್ಲಾರು ಮಾಡುವುದು ಹೊಟ್ಟೆಗಾಗಿ “ಅಂತಾ ಹೇಳಿದ್ದು. ಅದರಪಾಡಿಗೆ ಅಡಿರುತ್ತೆ ಬಿಡು, ಪಾಪ ಹೊಟ್ಟೆ ” ಎಂದು ಹರಿ ಕೆಂಪನನ್ನು ಸಮಾಧಾನಪಡಿಸಲು ಯತ್ನಿಸಿದ!!.

“ಅಂದ್ರೆ ಈ ಹೊಟ್ಟೆ ಹೊತ್ಕೊಂಡೆ ಬದ್ಕು ಅಂತೀರೇನು?. ಇಲ್ಲಾ ಅದೆಲ್ಲ ಆಗಲ್ಲ. ಹೊಟ್ಟೆ ಕಡಮೆ ಮಾಡಬೇಕು ಅಂತಾನೆ ರಾತ್ರಿ ಊಟ ಬಿಟ್ಟಿದೀನಿ!! ನಾನ್-ವೆಜ್ ಕೂಡ ತಿಂತಿಲ್ಲ, ೬ ತಿಂಗಳಾಯ್ತು. ಎಷ್ಟ್ ಕಷ್ಟ ಪಡ್ತಿದೀನಿ ಗೊತ್ತ? ಹೊಟ್ಟೆ ಕರ್ಗಿಸ್ಲೆ  ಬೇಕು ಅಂತ ನಿರ್ಧಾರ ಮಾಡಿ ಜಿಮ್ ಸೇರ್ಕೊಂಡಿರೋದು” ಪುಂಖಾನು ಪುಂಖವಾಗಿ ತನ್ನೆಲ್ಲ ಶಕ್ತಿ ಪ್ರಯೋಗಿಸಿ ದುಃಖವನ್ನು ಹೊರಗೆಡವಿದ ಕೆಂಪ.

“ನಾನ್ವೆಜ್ ಬಿಟ್ಟಿದೀನಿ ಅಂದ್ಯಲ್ಲ. ಬೆಳಿಗ್ಗೆ ತಿಂಡಿ ತಿನ್ನೋಣ ಅಂತ ಕರ್ದಾಗ ಬರ್ಲಿಲ್ಲ ನೀನು! ಮೊಟ್ಟೆ ಬೇಯ್ಸಿ ಉಪ್ಪು ಖಾರ ಹಾಕ್ಕೊಂಡು ತಿಂತಿದ್ದೆ!! ಮೊಟ್ಟೆ ಏನು ಗಿಡದಿಂದ ಬರ್ತಿದ್ಯೆನ್ರಪ್ಪ?. ಯಾರದ್ರೂ ನೋಡಿದ್ರ?. ನಮೂರ್ನಲ್ಲೆಲ್ಲ ಕೋಳಿ ಮೊಟ್ಟೆ ಇಡುತ್ತೆ. ಈ ಬೆಂಗಳೂರು “ಐಟಿ-ಬೀಟಿ” ಸಿಟಿ ಅಂತ ಮೊಟ್ಟೆ ಏನು ಮರದಿಂದ ಬರೋಹಾಗೆ ಮಾಡಿದರೇನು ನಮ್ಮ “ಬಿಟಿ” ವಿಜ್ಞಾನಿಗಳು ?. ನೀ ಮೊಟ್ಟೆ ತಿಂದರೆ ನನಗೇನೂ ಹೊಟ್ಟೆ ಕಿಚ್ಚಿಲ್ಲ . ಆದರೂ ಅನುಮಾನ ಶಮನಕ್ಕಾಗಿ ಕೇಳಿದೆ ” ನಾನೆಂದೆ.

ನಾ ತಿನ್ನೋ ಮೊಟ್ಟೆ ವೆಜ್ ಕಣ್ರಪ್ಪ. “ಫಾರಂ ಕೋಳಿ ” ಮೊಟ್ಟೆಯಲ್ಲಿ ಮರಿ ಆಗಲಿಕ್ಕೆ ಬೇಕಾದ ಗುಣ ಇಲ್ಲವಂತೆ. ಮತ್ತೇನೇನೋ ಕಾರಣ ನೀಡಿ ಅಮೇರಿಕ ವಿಜ್ಞಾನಿಗಳೇ ಮೊಟ್ಟೆ ವೆಜ್ ಅಂತ ತೋರಿಸಿದ್ದಾರೆ ಎಂದ ಕೆಂಪ. ನಮಗೆ ಗೊತ್ತಿರೋ ಹಾಗೆ ಪ್ರಾಣಿಜನ್ಯ ಆಹಾರವನ್ನು “ನಾನ್ ವೆಜ್ ” ಅಂತ ಕರಿತೀವಿ ತಾನೆ? ಎಂದು ಕೇಳಿದೆ.

ಪ್ರಾಣಿಯಿಂದ ಬರೋದೆಲ್ಲ ನಾನ್-ವೆಜ್ ಅನ್ನೋ ಹಾಗಿದ್ರೆ ಹಾಲು ಮೊಸರು ಎಲ್ಲ  ನಾನ್-ವೆಜ್ ಆಗಬೇಕಲ್ಲ. ಅದನ್ನ ಯಾಕೆ ವೆಜ್ ಅಂತ ಕರಿತಾರೆ? ಎಲ್ಲಿಂದ ಬಂದ್ರಿ ಸಾರ್ ತಾವು? ಕೆಂಪು ಬಸ್ ಹತ್ಕೊಂಡು, ಬಾ ಅಂದ ತಕ್ಷಣ ಬಂದ್ಬಿಡೋದ? ಸ್ವಲ್ಪ “ಜನರಲ್ ನಾಲೆಜ್ ” “ಇಂಪ್ರೂವ್” ಮಾಡ್ಕೋ ಹೋಗು ಎಂಬ ಫ್ರೀ ಸಲಹೆ ತೇಲಿಬಂತು. ಹೊಡೆಯುವವನ ಕೈಲಿ ಕೋಲು ಕೊಟ್ಟು ಹೊಡೆಸಿಕೊ೦ಡ೦ತಾಯ್ತು ನನ್ನ ಪರಿಸ್ಥಿತಿ ಎಂದು ಗೊಣಗುತ್ತ ಸುಮ್ಮನೆ ಕುಳಿತೆ.

ಅಷ್ಟರಲ್ಲೇ ಅಪದ್ಭಾನ್ಧವನಂತೆ ಮಧ್ಯ ಪ್ರವೇಶಿಸಿದ ಸಂತ್ಯಾ , ಏನ್ರಪ್ಪಾ ನಿಮ್ಮ ಕಿತ್ತಾಟ. ಅವಾಗಿಂದ ನೋಡ್ತಿದೀನಿ. ಕೋಳಿ ಅಂತೆ, ಮೊಟ್ಟೆ ಅಂತೆ, ಮಾಡ್ಲಿಕ್ಕೆ ಬೇರೆ ಕೆಲಸ ಇಲ್ಲೇನು ಎಂದು ನಯವಾಗಿ ಗದರಿದ. ಅನುಮಾನ ಇಟ್ಕೊಂಡ್ ಬದುಕಬಾರದು ಅಂತ ತಿಳಿದವರು ಹೇಳ್ತಾರೆ. ಅದ್ಕೆ “ಜಸ್ಟ್ ಡೌಟ್ ಕ್ಲೀಯರಿಂಗ್ ” ಎಂದು ನನ್ನನ್ನು ಸಮರ್ಥಿಸಿಕೊಳ್ಳಲು  ಯತ್ನಿಸಿದೆ.

“ಅನುಮಾನದ ಮನೆ ಹಾಳಾಗ್ಲಿ. ಈ ಕೆಟ್ ಅನುಮಾನ ಹುಟ್ಟಿ ದ್ರಿಂದಲೇ , ಸೀತಾ ಮಾತೆ “ಅಗ್ನಿ ಪರೀಕ್ಷೆ” ನಡೆದದ್ದು. ನೋಡು ತಮ್ಮಾ, ಈ ಜಗತ್ನಾಗೆ ಅದು ಬೇರೆ ಇದು ಬೇರೆ, ಅದು ಒಳ್ಳೇದು, ಇದು ಕೆಟ್ಟದ್ದು  ಅಂತೆಲ್ಲ ವಿಂಗಡಣೆ ಮಾಡಿದವರು ಯಾರು?. ನಾವೇ ತಾನೇ? ಹಾಂಗೆ ಈ ವೆಜ್ ನಾನ್-ವೆಜ್ ಕತೀನು ಐತಿ. ಅದು ವೆಜ್ , ಇದು ನಂ ವೆಜ್ ಅಂತ ವಿಂಗಡಣೆ ಮಾಡ್ಕೊಂದವ್ರು ಯಾರು ? ನಮ್ಮವರೇ ಅಲ್ವಾ?. ಹೀಂಗ ವಿಂಗಡಣೆ ಮಾಡ್ಕೊಂಡ್ ನಾವು ಎಷ್ಟ್ ಶಾಣ್ಯಾ ಅದೀವಿ ಅಂದ್ರ, ಅದೇ ಗುಂಪುಗಳನ್ನ ನಮಗೆ ಬೇಕಾದಾಗ ಬದ್ಲಾಯ್ಸೋ ಅವಕಾಶನೂ ಇಟ್ಕೊಂಡಿದೀವಿ. ಜಗತ್ತಲ್ಲಿ ಸ್ವಲ್ಪ ಓದಿ ಬುದ್ದಿವಂತರು ಅಂತ ಅನಿಸಿಕೊಂಡವರು, ತಮಗೆ ಮಾಡಲಿಕ್ ಕೆಸಲ ಇಲ್ದಿದ್ದಗ್ ಇಂತದ್ದನ್ನೇ ಮಾಡೋದು. ವಾದ ವಿವಾದ ಮಾಡಲಿಕ್ ಒಂದು “ಸಬ್ಜೆಕ್ಟ್ ” ಬೇಕಲ್ಲವ ಅವ್ರಿಗೆ?. ಇನ್ನು ಉತ್ತರ ಭಾರತದ ಕಡೆ ಹೋಗಿ, ಗಂಗಾ ತೀರದ ಬ್ರಾಹ್ಮಣರನ್ನ ಕೇಳಿ, ಅವ್ರು ಮೀನನ್ನು ಸಸ್ಯಾಹಾರ ಅಂತಾನೆ ಭಾವಿಸ್ತಾರೆ. ಹೋಟೆಲ್ಗ್ ಹೋಗಿ “ವೆಜ್ ”  ಊಟ ಕೊಡಪ್ಪ ಅಂದ್ರೆ ತಟ್ಟೆ ತುದಿಯಲ್ಲಿ ಮೀನು ಗ್ಯಾರಂಟೀ ಅಂತೆ ಗೊತ್ತೇನು?” . ನಮಗೆ ಬೇಕಾದ ಹಾಗೆ ರೂಲ್ಸ್ ಮಾಡ್ಕೊಂಡು, ಅದನ್ನೇ ಶಾಸ್ತ್ರ ಪುರಾಣ ಅಂತ ನಾಟ್ಕ ಮಾಡ್ತೀವಿ. ನೀನೇನು ತಲಿ ಕೆಡ್ಸ್ಕೊಬೇಡ. ಅಲ್ಲೋ ಕೆಂಪಾ, ನಾನ್-ವೆಜ್ ತಿಂದರೆ ಹೊತ್ತಿ ಬರುತ್ತೆ ಅಂತ ಯಾರು ಹೇಳಿದ್ರಪ್ಪ ನಿಂಗೆ?. ತಿಂದ್ಕೊಂಡು ಮೈ ಬಗ್ಸಿ ದುಡಿದರೆ ಹೊತ್ತಿ ಅಲ್ಲ ಏನೂ ಬರಂಗಿಲ್ಲ. ಬಕಾಸುರನಾಂಗ ತಿಂದ್ಕೊಂಡು ಕೆಲಸ ಮಾಡಂಗಿಲ್ಲ ಅಂದ್ರ ಏನ್ ತಿಂದರೂ ಹೊತ್ತಿ ಬೆಳಿತೈತಿ ತಮ್ಮಾ .” ಎಂದು ವೇದಾಂತಿಯಂತೆ ಸುದೀರ್ಘ ಭಾಷಣ ಬಿಗಿದ ಸಂತ್ಯಾ .
 
“ಹೊಟ್ಟೆ ಅಂದರೆ ಏನಂತ ತಿಳಿದಿದ್ದಿಯ. ಅಲ್ನೋಡು ನಮ್ಮ ಕ್ರಿಕೆಟ್ ಟೀಮು. ಹೊಟ್ಟೆ ಇಲ್ದಿರೋದು ಯಾರಿದ್ದಾರೆ ಹೇಳು?. ಎಲ್ಲರ ಮೂಗಿಗೂ ಒಂದೊಂದು ಚಿಕ್ಕ ಸೊಂಡಿಲ ಹಚ್ಚಿ ಬಿಟ್ಟರೆ ಮುಗಿತು, ಚೌತಿ ಹಬ್ಬದ ಗಣೇಶನಂತೆ ಕಾಣಿಸ್ತಾರೆ ಎಲ್ಲರು. ಗ್ರೌನ್ದಲ್ಲಿ ಬಾಲ್ ಹಿಡಿರೊ ಓಡ್ರೋ ಅಂದ್ರೆ ಬೆಳಿಗ್ಗೆ ಎದ್ದು ‘ ಜಾಗಿಂಗ್ ‘  ಹೊಗೊರ್ತರ ಓಡ್ತಾರೆ. ಅಷ್ಟಕ್ಕೇ ಅವ್ರಿಗೆ ಕೋತಿ ಕೋತಿ ಪಗಾರ್ ಬೇರೆ ಸಿಗತ್ತೆ. ಇರಲಿಬಿಡು ಹೊಟ್ಟೆ , ‘ ಐಪಿಎಲ್ ‘ ಟೀಮಿಗಾದ್ರೂ ಪ್ರಯತ್ನ ಮಾಡ್ತಿಯಂತೆ” ಎಂದು ಅಶೋಕ ಪಟಪಟನೆ ಸಾಸಿವೆಯಂತೆ ಸಿಡಿದ.

ಅಷ್ಟರಲ್ಲಾಗಲೇ ಆಷ್ಟ್ರೇಲಿಯಾ ತಂಡದ ‘ಡೇವಿಡ್ ವಾರ್ನರ್ ‘ ಒಂದು ಭರ್ಜರಿಯಾದ ಬೌಂಡರಿ ಹೊಡೆದಿದ್ದ. ಬಾಲ್ ತನ್ನ ಪಕ್ಕದಲ್ಲೇ ಹಾಡು ಹೋದರೂ ಅದನ್ನು ಹಿಡಿಯಲಾಗದೆ, ಕ್ಷೇತ್ರರಕ್ಷಕನೊಬ್ಬ ತಿನುಕಾಡಿದ್ದ(ಹೆಸರು ಬೇಡ !!).

“ಥೂ ನನ್ಮಗನ ಹೊಟ್ಟೆ ನೋಡು. ಎಮ್ಮೆಥರ ಬೆಳೆದಿದ್ದಾನೆ. ಸ್ವಲ್ಪ ಬಗ್ಗಿ ಬಾಲ್ ಕೂಡ ಹಿಡಿತಿಲ್ಲ” ಎಂದು ಕೆಂಪ ತನ್ನ ಹೊಟ್ಟೆಯ ಗಾತ್ರದ ಪರಿಯನ್ನು ಮರೆತು ಉಗಿದ. ಅವನ ಹೊಟ್ಟೆಯನ್ನು ನೋಡಿ (ಮುಖವನ್ನು ನೋಡಲಾರದೆ ?) ನಗು ತಡೆಯಲಾರದೆ, ನಾವು ಎದ್ದು ಒಳನಡೆದವು.        

 

ಬೃಂದಾವನ

(ನಾವು ಒಮ್ಮೊಮ್ಮೆ ಜೀವನ ಬಹುಮುಖ್ಯ ವಸ್ತುವನ್ನು ಕಳೆದುಕೊಂಡಾಗ,  ಎಲ್ಲ ಘಟನೆಗಳಲ್ಲೂ , ಆ  ಕಳೆದು ಹೋದ ಅಮೂಲ್ಯ ವಸ್ತುವಿನ ಶೋಧವೇ ಮುಖ್ಯವಾಗಿಬಿಡುತ್ತದೆ. ಕಳೆದು ಹೋದ ವ್ಯಕ್ತಿಯ ಮೌಲ್ಯ ಅರಿವಾಗುವುದು ಅಗಲಿಕೆಯಲ್ಲಿ ಮಾತ್ರ !!. ರಾಧೆಯ ಮನವೂ ಕೃಷ್ಣ ಕಾಣದಿದ್ದಾಗ ಪರಿತಪಿಸುತ್ತಿತ್ತೆ? ಕೃಷ್ಣನ ಅಗಲಿಕೆಯ ನೋವಿನಿಂದ ಬಳಲಿರುವ ರಾಧೆಯ ಮನಸ್ಸು ಎಲ್ಲೆಲ್ಲೂ ಕೃಷ್ಣ ರೂಪವನ್ನೇ ಹುದುಕುತ್ತಿತ್ತೆ?. ಇಲ್ಲಿದೆ ರಾಧೆಯ ಮನಕ್ಕೊಂದು ಅಕ್ಷರ ರೂಪ.)

ನೀಲಾಕಾಶದಿ,
ನೀಲ ಮೇಘ ಶ್ಯಾಮನೋಮ್ಮೆ ಕಾಣಬಾರದೆ?

ಹೃದಯಾಕಾಶದಿ,
ಚಿತ್ತಾಪಹಾರಿಯ ಚಿತ್ರವೊಮ್ಮೆ ಮೂಡಬಾರದೆ?

ನೀಲ ನೆತ್ರನ ನಗುವು ಇಂದೇಕೋ ಕೇಳದಾಗಿದೆ,
ಮೊರೆತ ಮಾತ್ರ ಎಂದಿನಂತೆ ಹಾಗೆ ಉಳಿದಿದೆ !!

ನಗುವಿನಲ್ಲೂ ಅಳುವಿನಲ್ಲೂ ನಿತ್ಯವರ್ಣನೆ,
ಮನವು ಬಯಸುತಿಹುದು ಮತ್ತೆ ಅವನ ಬಣ್ಣನೆ !!

ಗಿರಿಕಂದರ ಶಿಖರಗಳಲೂ  ಅವನ ರೂಪವೇ,
ಈ ಮುಗ್ಧ ಮಗುವ ಮೇಲೆ ಅವಗೆ ಕೋಪವೇ?

ಈ ಸ್ನಿಗ್ಧ ಚಲುವೆಲ್ಲ ಅವನದಲ್ಲವೇ ?
ಚಲುವನಿತ್ತ ಇನಿಯ ಮತ್ತೆ ಅವನೇ ಅಲ್ಲವೇ?

ಅಂದಮೇಲೆ ಮತ್ತೆ ಗೋಪ ಬಂದೆ ಬರುವನು,
ಬೃಂದಾವನಕೆ ಮತ್ತೆ ನಗುವ ತಂದೆ ತರುವನು !!   

 

ಆತ್ಮ ನಿವೇದನೆ (ಆತ್ಮ ನೀ – ವೇದನೆ?)!

( ಪ್ರತಿಯೊಬ್ಬರಿಗೂ ತನ್ನದೇ ಅದ ಕನಸುಗಳಿವೆ. ಜೀವನದ ಭವಿತವ್ಯದ ಹಂಬಲವಿದೆ . ಸುಂದರ ನಾಳೆಗಳ ನೀರಿಕ್ಷೆ ಇದೆ. ಬೆಳವಣಿಗೆಯ ಹಂತದಲ್ಲಿ ಜೀವನದ ಸಾರ್ಥಕತೆಯ ಪ್ರಶ್ನೆಯೂ ಆಗಾಗ ಕಾಡುವುದು ಸ್ವಾಭಾವಿಕ. ನನ್ನೊಳಗಿನ ಪ್ರಶ್ನೆಗಳು ಇಲ್ಲಿ ಕವನ ರೂಪದಲ್ಲಿ.)

ಯಾರೋ ಎಳೆದುಹೋದ ಪರದೆಯಂತೆ
ಮುಸುಕಿದಾ ಮಾಯೆ,
ಬಿಟ್ಟೆನೆಂದರೂ ಬಿಡದೀ
ಬೇಗುದಿಯ ಛಾಯೆ.

ಎಲ್ಲೋ ಹುಟ್ಟಿ ಎಲ್ಲೋ ಹರಿವ
ತೊರೆಗಳಂತೆ ಬದುಕು,
ಬುದ್ದಿಹೀನ ಆತ್ಮಗೆಡಿ
ದೊರೆಗಳಂತೆ ಥಳುಕು.
 
ಆಸೆ ಕಾಮ ಕ್ರೋಧವೆಂಬುದೆ
ಈ ಜಗದ ಸರಕು,
ಎಲ್ಲ ಮೀರಿ ಬೆಳೆಯಬಲ್ಲೆವೆ ನಾವು?
ಎಂಬ ಅಳುಕು.

ಸದಾ, ನಾನು ನನ್ನದೆಂಬ ಭಾವಗಳ ಸೆಳೆತ
ಮೋಹವೆಂಬ ಪಾಶವಿದುವೆ ,
                   ಕತ್ತಿಯಲಗಿಗಿಂತ ಹರಿತ.
ಇದರಿಂದಲೇ ಲೋಕವಾಯ್ತೆ ಸದಾ ದುಖ:ಭರಿತ?
ಕೆಳ್ವರಾರು ಲೋಕದಲ್ಲಿ ನನ್ನೊಳಗಿನ ಮೊರೆತ.
 

 

ಮುನಿಸು

Image

(ಕೃಷ್ಣ ರಾಧೆಯನ್ನು ಬಹುದಿನಗಳ ನಂತರ ಸಂಧಿಸಿದಾಗ, ಆಕೆ ಕೋಪಿಸಿಕೊಂಡು, ತೋರುವ ಹುಸಿಮುನಿಸು, ಮತ್ತು ಆತನ ಸಾನ್ನಿಧ್ಯದಲ್ಲಿ ಮತ್ತೆ ಶರಣಾಗುವ ಪರಿ)….

ಕರೆದರೂ ಬರುತ್ತಿಲ್ಲ
ನೀನನ್ನ ಸಖನಲ್ಲ
ಹೋಗು ಹೊಗೆನ್ನ ತೊರೆದು.

ಬಣ್ಣದಾ ಮಾತೆಲ್ಲ
ಹುಸಿ ಪ್ರೇಮ ಬೇಕಿಲ್ಲ
ಕುಳಿತಿರು ನೀ ದೂರಸರಿದು.

ಪ್ರೀತಿಯ ಮಾತಿಲ್ಲ
ಪ್ರೇಮದಾ ಶೃತಿಯಿಲ್ಲ
ಮನವಾ ಯ್ತು ಇಂದೇಕೋ ಬರಿದು.

ನಕ್ಕರೂ ನಗುತಿಲ್ಲ
ಅಕ್ಕರೆಯು ಇನಿತಿಲ್ಲ
ನೀನಲ್ಲ ನನ್ನ ಹರಿಯು.

ನೀನಿರುವೆ ಮನದಲ್ಲಿ
ನನ್ನಾತ್ಮ ಪ್ರಾಣದಲಿ
ನೀನೇನೆ ಈ ಜೀವ ಗತಿಯು.

ಹುಸಿಮುನಿಸ ನಂಬದಿರು
ತೊರೆದೆನ್ನ ಪೋಗದಿರು
ನಾನಲ್ಲ ನಿನ್ನ ಅರಿಯು.

 

ಕಂಪನ

      

(ಕೃಷ್ಣನಲ್ಲಿ ಅನುರಕ್ತಳಾದ ಗೋಪಿಕೆ,ಕೃಷ್ಣಎದುರಿನಲ್ಲೇ ಇದ್ದರೂ ಪ್ರೇಮವನ್ನು ಅವನಲ್ಲಿ  ನಿವೇದಿಸಲಾರದೆ, ಸಖಿಯಲ್ಲಿ ತನ್ನ ಭಾವವನ್ನು   ವ್ಯಕ್ತಪಡಿಸುವ ಪರಿ…..)

ಹೊರಗೆ ತಂಗಾಳಿ
ಒಳಗೆ ಬಿರುಗಾಳಿ
ಈ ಮನವನೆಲ್ಲಿ ಕಟ್ಟಿಡಲೇ ನಾನು?

ಹೃದಯ ಆಸೆಯ ಕೂಪ
ಭುವಿಯು ಬೆಂದಿಹ ತಾಪ
ಶೃಂಗಾರ ಸಿಹಿಗನಸ ಬಚ್ಚಿ  ಇಡಲೇನು?

ನಭದಿ ನಗುವ ಪೂರ್ಣ
ಇದಿರು ನೀಲವರ್ಣ
ಧುಮ್ಮಿಕ್ಕುವಾಸೆಯಾ ಹೊಸಕಿ ಹಾಕಲೇನು?

ಸದಾ ಅವನ ಧ್ಯಾನ
ನೀನೆ ನನ್ನ ಪ್ರಾಣ
ತುಟಿ ಬಿರಿದು ನಗುವೊಂದ ಸೂಸಲಾರೆಯೇನು?

ಬರಿದು ಬರಿದೆ ಮುನಿಸು
ಅದೇ ತುಂಟ ಮನಸು
ನನ್ನೊಮ್ಮೆ ಬರಸೆಳೆದು ತಬ್ಬಿಹಿಡಿಯಬಾರದೇನು?

ನಿತ್ಯ ಹಾಸ ವದನ
ಇವನೇ ನನ್ನ ಮದನ
ಬಿಗಿದಪ್ಪಿ ಮುತ್ತಿಕ್ಕಿ ಸಂತೈಸನೆನು?

 

ಹಾಳೂರಿನ ದಿಬ್ಬಗಳು


     ಮಬ್ಬುಗಟ್ಟು ತ್ತಿರುವ ಇಳಿಸಂಜೆ. ಪಕ್ಕದಲ್ಲಿರುವವರ ಆಕೃತಿ ಕಂಡರೂ ಮುಖ ಕಾಣದು. ಕಂಡರೂ ಅವರು ಇವರೇ$$ ಎಂದು ಗುರುತಿಸಲಾಗದು. ಒಂದಡಿ ದೂರದಲ್ಲಿ ಗರುಡಗಂಬದಂತೆ ನಿಂತ ಧೈತ್ಯದೇಹಿಯನ್ನು ನೋಡಲೂ “ಟಾರ್ಚ್” ಬೇಕು.

     ಏನೋ ಮೆರವಣಿಗೆ ಹೊರಟಂತೆ, (ಅ)ಶಿಸ್ತಿನ ಸಿಪಾಯಿಗಳಂತೆ, ಒಬ್ಬರಹಿಂದಿಬ್ಬರು, ಪಕ್ಕಕ್ಕೊಬ್ಬರು, ಆಕಡೆ ಮತ್ತೆ ಮೂವರು. (ಅಬ್ಬಾ ತಲೆ ಲೆಕ್ಕ ತೆಗೆಯಲಾರೆ!!). ಜಾತ್ರೆಗೆ ಹೊರಟರೋ? ಯಾವ ಜಾತ್ರೆ ಇರಬಹುದು? ಉಹುಂ, ಸದ್ಯ ಯಾವುದೇ ಜಾತ್ರೆ ಇರುವಂತೆ ತೋರುತ್ತಿಲ್ಲ ! ಅದು ಜಾತ್ರೆಗಾದರೆ ಈ ಸಂಜೆಯ ಹೊತ್ತಲ್ಲೇಕೆ ಪ್ರಯಾಣ? ಮತ್ತೆ ? ಗುಳೆ ಹೊರಟರಾ? ಗುಳೆ ಹೊರಟರೆ “ಲಗೇಜು” ಇರಬೇಕಲ್ಲವಾ ? ಅದೂ ಕಾಣಿಸ್ತಿಲ್ಲ ! ಅಷ್ಟಕ್ಕೂ ಗುಳೆ ಹೋಗುವಂತದೇನಾಗಿದೆ ಈ ಊರಿಗೆ? “ಹಂದಿ ಜ್ವರ ” ಎನ್ನುವ ಹೆಮ್ಮಾರಿ ಒಂದನ್ನ ಬಿಟ್ಟು ಉಳಿದಿದ್ದೆಲ್ಲ ‘ನಾರ್ಮಲ್’ ಆಗಿಯೇ ಇದೆಯಲ್ಲ ! ನನ್ನಷ್ಟಕ್ಕೆ ನಾನು ಸಮಾಧಾನ ಪಟ್ಟುಕೊಂಡೆ !

     ಒಂದಿಬ್ಬರು ನಿಧಾನವಾಗಿ ಸಾಗುತ್ತಿದ್ದರೆ, ನಾಲ್ಕಾರು ಜನ ಪೆಕರು ಪೆಕರಾಗಿ ಹಲ್ಕಿರಿಯುತ್ತಾ ನಡೆಯುತ್ತಿದ್ದಾರೆ. ಇನ್ನೂ ಕೆಲವರು ಏನೋ ಧಾವಂತದಲ್ಲಿ (ಕ್ವಟ್ರೋಚಿಗೆ ಭಾರತ ಬಿಟ್ಟು  ಓಡಿ ಹೋಗಲು ಧಾವಂತವಿದ್ದಂತೆ !! (ಹೋಗಲು ಅವನಿಗೆ ಧಾವಂತವಿತ್ತೋ? ಅಥವಾ ಕಳುಹಿಸಲು ನಮ್ಮವರಿಗೆ ತರಾತುರಿ ಇತ್ತೋ ಎನ್ನುವುದು ಇಲ್ಲಿ ಅಪ್ರಸ್ತುತ!!) )ಸಾಗುತ್ತಿದ್ದಾರೆ. ಸುಮಾರು ಹನ್ನೆರಡರ ಪೋರಿಯೋಬ್ಬಳು ಕಾಲಿಗೆ ಚಕ್ರ ಕಟ್ಟಿ ಕೊಂಡು ಓಡುವ ಪ್ರಯತ್ನದಲ್ಲಿದ್ದಾಳೆ. ಹರೆಯದ ಹುಡುಗರ ಕೈ ಪಕ್ಕದಲ್ಲೇ ನಡೆಯುತ್ತಿರುವ ಗೆಳತಿಯ ಕೈಯಲ್ಲಿ ಭದ್ರವಾಗಿ ಕೂತು, ನಾಲ್ಕೂ ಕಾಲುಗಳು ಒಂದೇ ಗತಿಯಲ್ಲ್ಲಿ ಹೆಜ್ಜೆ ಇಡುತ್ತಿವೆ . ಆದರೆ ಅವನ ತುಂಟ ಕಂಗಳು ಮಾತ್ರ ಪಕ್ಕದಲ್ಲಿ ಸಾಗಿ ಹೋಗುತ್ತಿರುವ “ಚಂದ್ರ ಚಕೋರಿ”ಯರಮೇಲೆ ಆಗಾಗ ಹಾಯುತ್ತಿದೆ. “ಹಿರಿತಲೆ”ಗಳು ‘ಉಭಯ ಕುಶಲೋಪರಿ ಸಾಂಪ್ರತ ‘ ಮುಗಿಸಿ, ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾರೆ.

     ಇವೆಲ್ಲ ಅಪರೂಪಕ್ಕೆ  “ತಂತ್ರಾಂಶ ಕಾರ್ಖಾನೆ “ಯಿಂದ ಬೇಗನೆ ಹೊರಬಂದ ನಮಗೆ ಹೊಸದು. ಆದರೆ ಈ ದಿಬ್ಬಗಳು  ದಿನನಿತ್ಯ ಇವನ್ನೆಲ್ಲ ಕಂಡಿವೆ. ಜನರ ಅಲೆದಾಟಗಳನ್ನು ನೋಡಿವೆ . ಹೆಚ್ಚು ತಿಂದವರು (“ಲಂಚ್” ಅಥವಾ “ಲಂಚ”? ಏನನ್ನು ತಿಂದವರು ? ನೀವೇ ನಿರ್ಧರಿಸಿ) ಕರಗಿಸಲೆಂದೂ, ತಿನ್ನದವರು ಪಕ್ಕದ ಮೋರಿಯಿಂದ ಎತ್ತಿ ಕುದಿಸಿ ಮಸಾಲೆ ಹಾಕಿ ‘ಘಂ’ ಎನ್ನುವಂತೆ ಮಡಿದ “ಪಾನಿ ಪೂರಿ” ತಿನ್ನೋಣವೆಂದೂ, ತಿನ್ನಲಾಗದವರು ನೋಡೋಣ ಎಂದೂ (ಏನನ್ನ ನೋಡೋಣ? ಮುಂದಿನ ಪ್ಯಾರದಲ್ಲಿ ಉತ್ತರವಿದೆ. ), ಜೊತೆ(pair) ಇರುವವರು  ಸಮಯ ಸದ್ವಿನಿಯೋಗಕ್ಕೆಂದೂ, ಇರದವರು ಅರಸಲೆಂದೂ ತನ್ನೆಡೆಗೆ ಬರುವುದನ್ನು ಈ ದಿಬ್ಬಗಳು ಕಳೆದ ಹಲವಾರು ವರ್ಷಗಳಿಂದ ನೋಡಿವೆ. ಇಂಗ್ಲಿಷರು ಅದನ್ನು “ವಾಕಿಂಗ್” ಎಂದೂ, ಕನ್ನಡದವರು “ಗಾಳಿ ತಿನ್ನುವುದೆಂದೂ” ಹೇಳಿದ್ದನ್ನೂ ಅದು ಎಷ್ಟೋ ಸಾರಿ ಕೇಳಿಸಿಕೊಂಡಿದೆ.

     ಅಷ್ಟಲ್ಲದೇ ಈ ದಿಬ್ಬಗಳು ಇಂದು ವಾಯುವಿಹಾರಕ್ಕೆ ಬಂದಿರುವ ಅದೆಷ್ಟೋ “ನೆರೆತ ಕೂದಲಿನ ಯುವಕರು” ‘ ಲವ್ @ ಫಸ್ಟ್ ಸೈಟ್ ‘ ಎಂದು ಹಳ್ಳಕೆ ಬಿದ್ದದ್ದನ್ನು ನೋಡಿ ಪಕ ಪಕನೆ ನಕ್ಕಿದೆ . ಅದೇ ಜನರಿಗೆ ತನ್ನ ಮರೆಯಲ್ಲಿ ಪ್ರಥಮ ಪ್ರೇಮ ಪಾಠವನ್ನೂ ಕಲಿಸಿದೆ. ಅದೇ ಜನರ ಮುಂದಿನ ಪೀಳಿಗೆಯೂ ತನ್ನ ನೆರಳಿನಲ್ಲೇ ಪ್ರೇಮ ಪಾಠ ಕಲಿಯುತ್ತಿರುವ ಸಂತೃಪ್ತಿಯೂ ಈ ದಿಬ್ಬಗಳಿಗಿದೆ.

     ಹೆಂಗೆಳೆಯರು ಸೂಸಿದ ಸುಗಂಧ ದ್ರವ್ಯದ ಪರಿಮಳವನ್ನು ಅಸ್ವಾದಿಸಿದೆ. ಮಲ್ಲಿಗೆಯ ಘಮವನ್ನೂ ಅನುಭವಿಸಿದೆ . ಜೋಡಿ ಪಕ್ಷಿಗಳು ಎಲ್ಲಿಂದಲೋ ಹಾರಿ ಬಂದು, ದಿಬ್ಬಗಳ ನೆರಳಿನಲ್ಲಿ ಅವಿತು ಕುಳಿತು , ತಬ್ಬಿ ಹಿಡಿದು ಮುತ್ತಿಟ್ಟಾಗ, ಇವು ನಾಚಿ ಕಣ್ಮುಚ್ಚಿಕೊಂಡಿವೆ. ಪ್ರೇಮಿಗಳ ಪಿಸುಮಾತನ್ನು  ಪ್ರತಿನಿತ್ಯ ಕೇಳಿ ಅನುಭವಿಸಿವೆ.ಅದೇ ಪ್ರಣಯ ಪಕ್ಷಿಗಳು ದಿಬ್ಬದ ಮೇಲೆ ಬಿದ್ದು ಹೊರಳಾಡಿದಾಗ, ಅವರ ದೇಹ ಸಿರಿಯನ್ನು “ತಾನೆ ಅನುಭವಿಸಿದಷ್ಟು ” ಸಂತಸಪಟ್ಟಿವೆ. ಕುಡಿದು ತೂರಾಡಿಬಂದು,ಲೋಕವನ್ನೇ ಮರೆತು ಬಿದ್ದುಕೊಂಡಿರುವ  ಪುಂಡ  ಪಟಿಂಗರಿಗೆ ಅಂಗಿಯೊಳಗೆ ಇರುವೆ ಹರಿಸಿ,ತಕ್ಕ ಶಾಸ್ತಿ ಮಾಡಿವೆ.

     ಈ ರೀತಿಯ ದಿನಚರಿಯೇನೂ ಈ ದಿಬ್ಬಗಳಿಗೆ ತೀರಾ ಹೊಸತಲ್ಲ, ಅಥವಾ ತುಂಬಾ ಹಳತೂ ಅಲ್ಲ . ಆದರೆ ಕಳೆದ ಕೆಲವು ವರ್ಷಗಳಿಂದ ತನ್ನಕಡೆಗೆ ಸಾಗಿ ಬರುತ್ತಿರುವ ಜನ ಪ್ರವಾಹ ಊರ್ಧ್ವಗತಿಯಲ್ಲಿರುವುದು  ಮಾತ್ರ  ಈ ದಿಬ್ಬಗಳ ಅರಿವಿಗೆ ಬಂದಿದೆ. ೨ ವರ್ಷ ಎಳೆಯ ‘ಪಾಪು’ಗಳು ಅಮ್ಮನ ಮಡಿಲಿನಲ್ಲಿ ಕೂತು , ತನ್ನಡೆಗೆ ನೋಡಿ ನಕ್ಕು ನಲಿದಾಡುವುದು, ತನ್ನಮೇಲೆ ತಮ್ಮ ಪುಟ್ಟ ಪಾದಗಳನ್ನೂರಿ ಕುಣಿದು ಕುಪ್ಪಳಿಸುವುದು, ಆನಂದಿಸುವುದು ಇನ್ನೂ ಹಸಿ ಹಸಿಯಾಗಿಯೇ ಇದೆ. ಅದೇ ಕಂದಮ್ಮಗಳು ಕೇವಲ ಮತ್ತೆರಡು ವರ್ಷಗಳ ಅಂತರದಲ್ಲಿ, ಅನಿವಾರ್ಯ ಕರ್ಮವೋ ಎಂಬಂತೆ ‘ಗಲಿ ಸೇವನೆಗೆ ‘ ಬರುವುದನ್ನೂ , “ಅಸ್ತಮಾ” ಎನ್ನುವ ಪಿಶಾಚಿಯನ್ನು ಹೊತ್ತು ತಿರುಗುವುದನ್ನೂ ನೋಡಿ, ತನ್ನಲ್ಲೇ ತಾನು ಈ ಹಾಳೂರಿನ ನಗರಗಳಿಗೆ, ವಿಷ ಸೂಸುವ ಕಾರ್ಖಾನೆಗಳಿಗೆ ತನ್ನಲ್ಲೇ ತಾನು ಶಾಪ ಹಾಕಿದೆ.

     ಇಷ್ಟೆಲ್ಲಾ ಸಿಹಿ/ಕಹಿ ಸತ್ಯಗಳನ್ನು ತನ್ನಲ್ಲೇ ಅರಗಿಸಿಕೊಂಡ ಈ ದಿಬ್ಬಗಳು ಇಂದು ಮಾತ್ರ ತಮ್ಮ ಚೈತನ್ಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಶೋಕ ಸಾಗರದಲ್ಲಿ ಮುಳುಗಿದಂತೆ ತೋರುತ್ತಿದೆ. ನಾಲ್ಕಾರು ವರ್ಷದ ಎಳೆಯ ಕಂದಮ್ಮಗಳು ಇಂದು ಅದರ ಮಡಿಲಿನಲ್ಲಿ ಮಲಗಿವೆ. ಹಸಿವು, ಬಾಯಾರಿಕೆ ಸಂಕಟಗಳಿಂದ ಒದ್ದಾಡುತ್ತಿವೆ. ಎಲ್ಲಿಂದ ಬಂದ ಮಕ್ಕಳಿವು?. ಅವಕ್ಕೂ ಗೊತ್ತಿಲ್ಲ, ತನಗೋ ತಿಳಿದಿಲ್ಲ. ಎಲ್ಲಿನದ ಬಂದಿರೆಂದು ಕೇಳಲು ಧ್ವನಿಯೂ ಬರುತ್ತಿಲ್ಲ.

     ಇತ್ತ ವಾಯುವಿಹಾರಕ್ಕೆ ಬಂದವರಾದರೂ ಇದನ್ನು ಗಮನಿಸಿ ಸಹಾಯ ಮಾಡಬಾರದೆ? ನನಗೂ ಎಲ್ಲಾ ಅರ್ಥವಾಗುತ್ತಿದೆ ,ಆದರೆ ಕೂಗಿ ಹೇಳಲು ಧ್ವನಿ ಬರುತ್ತಿಲ್ಲ ಎಂದು ಆ ದಿಬ್ಬಗಳು ಮರುಗುತ್ತಿವೆ. “ವ್ಯಕ್ತಪಡಿಸಲಾರದ ಭಾವನೆಗಳು ಇದ್ದರೆಷ್ಟು ಸತ್ತರೆಷ್ಟು ?” ಎಂದು ತನ್ನನೇ ತಾನು ಹಳಿದು ಕೊಳ್ಳುತ್ತಿವೆ.  

     ಜಗತ್ತಿನ್ನ ಎಲ್ಲಾ ವೈಭೋಗಗಳನ್ನು ಕಂಡು ಅನುಭವಿಸಿದ ದಿಬ್ಬಗಳು, ಇಂದು ಅನ್ಯಮನಸ್ಕವಾಗಿವೆ.    “ಗಾಲಿ”ಗಳೂ, “ಧಣಿ”ಗಳೂ, “ಸ್ವಾಭಿಮಾನಿಗಳೂ”, ತಮ್ಮನ್ನು ಹಾಗೆ ಬಿಟ್ಟರೆ, ಮುಂದಿನ ತಲೆಮಾರಿಗೂ ಆಶ್ರಯ ನೀಡುವ ಸಂಕಲ್ಪ ಮಾಡಿ ಕುಳಿತಿವೆ. ಬಹುಬಲಿಯಂತೆ ನಗ್ನರಾಗಿ, ಕಣ್ಮುಚ್ಚಿ  ತಪೋನಿರತರಾಗಿ ಕುಳಿತಿವೆ. ಸುಮಾರು ವರ್ಷಗಳಿಂದ ಅಲ್ಲೇ ಕುಳಿತಲ್ಲೇ ಇವೆ. ಕುಳಿತೆ ಇರುತ್ತವೆ !! .

 
2 ಟಿಪ್ಪಣಿಗಳು

Posted by on ಏಪ್ರಿಲ್ 5, 2012 in ವಿಭೂತಿ

 
 
ಅಸೀಮಾ ಕನ್ನಡ ಮಾಸಿಕ

ಕನ್ನಡದ ಏಕೈಕ ರಾಷ್ಟ್ರೀಯ ವಿಚಾರಗಳ ಮಾಸಿಕ. ಇಪ್ಪತ್ತು ವರ್ಷಗಳಿಂದ ಪ್ರಕಟಿತ. ರಾಷ್ಟ್ರೀಯ ವಿಚಾರಗಳು ವೈಚಾರಿಕ ನೆಲೆಯಲ್ಲಿ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಪ್ರತೀ ತಿಂಗಳು ಪ್ರಕಟವಾಗುತ್ತಿವೆ. ಇದುವರೆಗೆ ನಾಡಿನ ಖ್ಯಾತ ಚಿಂತಕರನೇಕರ ಲೇಖನಗಳು "ಅಸೀಮಾ"ದಲ್ಲಿ ಪ್ರಕಟವಾಗಿವೆ. ಸಂಶೋಧನೆ, ವಿಚಾರಕ್ಕೆ ಹಚ್ಚುವ ಬರಹಗಳಿಗೆ ಆದ್ಯತೆ.

ಸಿ.ಎಸ್.ಎಲ್.ಸಿ. CSLC

Centre for the Study of Local Cultures at Kuvempu University

ಭಾವ ಕಿರಣ

Just another WordPress.com weblog

ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...

ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ...

ಮೂರು ಊರಿನ ಸುತ್ತ...

ಶಿಶಿರ ಹೆಗಡೆ

Madannoor

Al-valiyyu shaheed fee sabeel (RA)

ನೆನಪಿನ ಸಂಚಿ

ಕೈ ಹಾಕಿದರೆ ಮುಗಿಯದಷ್ಟು ಬಿಂಬಗಳು…

jamunarani

Just another WordPress.com site

Mangalur News

" ಸತ್ಯ ಮೇವ ಜಯತೇ "

rajendrakumarraikodi

ಕನ್ನಡ ಸಾಹಿತ್ಯ, ಸಂಗೀತ ಮತ್ತು ನಾನು

ನಿಲುಮೆ

ಎಲ್ಲ ತತ್ವದ ಎಲ್ಲೆ ಮೀರಿ...!

Akash's Photo-Blog

A picture is worth a thousand words... A photo blog is both.

ಕಾಲದ ಕನ್ನಡಿ

ಸತತ ಪಾರದರ್ಶಕತೆ

ಒಂದಿಷ್ಟು ಕನಸು

ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ "ಬದುಕು"

ಕುಂದಾಪ್ರ ಕನ್ನಡ

ಕುಂದಗನ್ನಡದ ಅಂದಕ್ಕೊಂದು ಪುಟ್ಟ ತಳಿಕಂಡಿ...

ರಾ ಗ ನೌ ಕೆ

ಎದೆಯಾಳದಿಂದೆದ್ದು ನಭನೀಲಿಗೇರಿದ್ದು..

ನೀಲಾಂಜಲ

ನಾನು, ನೀವು ಮತ್ತು ನನ್ನ ಯೋಚನೆಗಳು

ಕುಂಭಾಶಿ ಹುಡುಗ

ರೆಕ್ಕೆ ಬಿಚ್ಚಿದ ಸಂಭ್ರಮ..!

ಸತ್ಯದ ಅನಾವರಣ ಮತ್ತು ನಿರಂತರ ಹುಡುಕಾಟ

%d bloggers like this: